ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮಂಗಳವಾರ ಚಂದ್ರಯಾನ - 3 ಬಾಹ್ಯಾಕಾಶ ನೌಕೆಯನ್ನು ಟ್ರಾನ್ಸ್‌ಲೂನಾರ್ ಕಕ್ಷೆಗೆ ಸೇರಿಸಿದೆ. “ಚಂದ್ರಯಾನ-3 ಭೂಮಿಯ ಸುತ್ತಲಿನ ತನ್ನ ಕಕ್ಷೆಯನ್ನು ಪೂರ್ಣಗೊಳಿಸಿದೆ ಮತ್ತು ಚಂದ್ರನ ಕಡೆಗೆ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.
ISTRAC (ISRO ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್) ನಲ್ಲಿ ಯಶಸ್ವಿ ಪೆರಿಜಿ - ಫೈರಿಂಗ್ ಪೂರೈಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಬಾಹ್ಯಾಕಾಶ ನೌಕೆಯ ಮುಂದಿನ ನಿಲುಗಡೆ ಚಂದ್ರನ ಅಂಗಳವೇ ಆಗಿದೆ. ಅದು ಚಂದ್ರನ ಬಳಿಗೆ ಆಗಮಿಸುತ್ತಿದ್ದಂತೆ ಆಗಸ್ಟ್ 5 ರಂದು ಲೂನಾರ್ - ಆರ್ಬಿಟ್ ಅಳವಡಿಕೆ (LOI) ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.
ಮಂಗಳವಾರದ ಟ್ರಾನ್ಸ್ - ಲೂನಾರ್ ಇಂಜೆಕ್ಷನ್ (ಟಿಎಲ್‌ಐ) ಅಳವಡಿಕೆ ನಂತರ, ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಯತ್ತ ಪಯಣ ಬೆಳಸಿದೆ. ಮತ್ತು ಭೂಮಿಯ ಕಕ್ಷೆಯಿಂದ ದೂರ ಸರಿದಿದ್ದು, ಅದನ್ನು ಚಂದ್ರನ ಸಮೀಪಕ್ಕೆ ತಲುಪಿಸುವ ಮಾರ್ಗವನ್ನು ಅನುಸರಿಸಲಾಗುತ್ತಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಬಾಹ್ಯಾಕಾಶ ನೌಕೆಯು ಮಂಗಳವಾರ ಚಂದ್ರನ ಕಡೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ, TLI ಕುಶಲತೆಯನ್ನು ಅನುಸರಿಸಿ ಭೂಮಿಯ ಕಕ್ಷೆಯನ್ನು ತೊರೆದ ನಂತರ ಅದನ್ನು 'ಚಂದ್ರನ ಪಥ'ದಲ್ಲಿ ಇರಿಸಲಾಗಿದೆ. ಬಾಹ್ಯಾಕಾಶ ನೌಕೆ ಇದೀಗ ಚಂದ್ರನ ಕಕ್ಷೆಯತ್ತ ತಲುಪಲಿದ್ದು, ಚಂದ್ರನ ಕಕ್ಷೆಯಲ್ಲಿ ಸುತ್ತು ಹಾಕಲಿದೆ.
ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುವ ಲ್ಯಾಂಡರ್ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಈ ಬಾರಿ ಯಶಸ್ವಿಯಾಗಿ ರೋವರ್ ಸಾಪ್ಟ್ ಲ್ಯಾಂಡಿಂಗ್ ಆಗುವಂತೆ ಪ್ರಯತ್ನಿಸುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೇಳಿದೆ. ಜುಲೈ 14 ರಂದು ಚಂದ್ರಯಾನ 3 ರ ರಾಕೆಟ್ ಅನ್ನು ನಭಕ್ಕೆ ಉಡ್ಡಯನ ಮಾಡಲಾಗಿತ್ತು. ಅದಾದ ಬಳಿಕ ಇಸ್ರೋ ಹಂತ ಹಂತವಾಗಿ ಬಾಹ್ಯಾಕಾಶ ನೌಕೆಯನ್ನು ಕಕ್ಷೆಯ ವಿವಿಧ ಭಾಗಗಳಿಗೆ ಎತ್ತರಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಈಗಾಗಲೇ ಐದು ಬಾರಿ ಕಕ್ಷೆಗೆ ಎತ್ತರಿಸುವ ಕೆಲಸವನ್ನು ಇಸ್ರೋ ಮಾಡಿದೆ.
ಚಂದ್ರಯಾನ 3ರ ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗುವುದನ್ನೇ ಬಾಹ್ಯಾಕಾಶ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಏಕೆಂದರೆ, ಇದುವರೆಗೆ ಅಮೆರಿಕ, ಚೀನಾ, ರಷ್ಯಾ ರಾಷ್ಟ್ರಗಳು ಮಾತ್ರ ಯಶಸ್ವಿಯಾಗಿ ಚಂದ್ರನ ಮೇಲೆ ಯಶಸ್ವಿಯಾಗಿ ಗಗನ ನೌಕೆಯನ್ನು ಇಳಿಸಿವೆ. ಚಂದ್ರಯಾನ 3 ಸುರಕ್ಷಿತ ಮತ್ತು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆದರೆ, ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಭಾರತವಾಗಲಿದೆ.
ಇದನ್ನು ಓದಿ:ಚಂದ್ರನ ಮೇಲೆ ಮಾನವ ವಾಸಸ್ಥಾನದ ಸಾಧ್ಯತೆಗಳ ಬಗ್ಗೆ ಚಂದ್ರಯಾನ 3 ಅನ್ವೇಷಿಸಲಿದೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್