ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಮತ್ತು ಡೀಪ್ ಫೇಕ್ ಕಂಟೆಂಟ್ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಐಟಿ ಸಚಿವಾಲಯ ಮುಂದಿನ ಎರಡು ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮಂಗಳವಾರ ಹೇಳಿದ್ದಾರೆ.
ತಪ್ಪು ಮಾಹಿತಿ ಮತ್ತು ಡೀಪ್ ಫೇಕ್‌ಗಳ ಕುರಿತು ಸಾಮಾಜಿಕ ಮಾಧ್ಯಮ ಕಂಪನಿಗಳೊಂದಿಗೆ ನಡೆದ ಎರಡನೇ 'ಡಿಜಿಟಲ್ ಇಂಡಿಯಾ ಸಂವಾದ' ಸಭೆಯಲ್ಲಿ, ನವೆಂಬರ್ 24ರಂದು ನಡೆದ ಸಭೆಯ ನಂತರ ಆಗಿರುವ ಪ್ರಗತಿಯನ್ನು ಪರಿಶೀಲಿಸಿ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿದರು. ಡೀಪ್ ಫೇಕ್‌ಗಳ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಭಾರತೀಯ ನಿಯಮಗಳ ಪ್ರಕಾರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ತಮ್ಮ ನೀತಿಗಳನ್ನು ಬದಲಾಯಿಸಲು ಕೇಂದ್ರ ಸರ್ಕಾರ ಏಳು ದಿನಗಳ ಗಡುವು ನೀಡಿತ್ತು.
"ಕಳೆದ ತಿಂಗಳು ತೆಗೆದುಕೊಂಡ ನಿರ್ಧಾರಗಳನ್ನು ಅನೇಕ ಪ್ಲಾಟ್ಫಾರ್ಮ್ಗಳು ಈಗಾಗಲೇ ಪಾಲಿಸುತ್ತಿವೆ. ಮುಂದಿನ ಎರಡು ದಿನಗಳಲ್ಲಿ ಶೇಕಡಾ 100ರಷ್ಟು ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ನೀಡಲಾಗುವುದು" ಎಂದು ಸಚಿವರು ಹೇಳಿದರು. "ಪ್ಲಾಟ್ಫಾರ್ಮ್ಗಳು ನಿಯಮ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಡಿಜಿಟಲ್ ನಾಗರಿಕರ ಸುರಕ್ಷತೆಗಾಗಿ ಐಟಿ ಕಾಯ್ದೆಗೆ ಹೊಸ ತಿದ್ದುಪಡಿ ಮಾಡುವ ಪ್ರಸ್ತಾಪ ಪರಿಗಣನೆಯಲ್ಲಿದೆ" ಎಂದು ಚಂದ್ರಶೇಖರ್ ಹೇಳಿದರು.