ಕರ್ನಾಟಕ

karnataka

ETV Bharat / science-and-technology

ಡೀಪ್ ಫೇಕ್ ತಡೆಗೆ ಶೀಘ್ರ ಹೊಸ ಕಾನೂನು: ಕೇಂದ್ರ ಸರ್ಕಾರ - ಡೀಪ್ ಫೇಕ್ ನ್ಯೂಸ್

ಡೀಪ್​ ಫೇಕ್​ ವೀಡಿಯೊಗಳ ನಿಯಂತ್ರಣಕ್ಕೆ ಶೀಘ್ರದಲ್ಲೆ ನಿಯಮ ಜಾರಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

New regulation to tackle deepfakes soon
New regulation to tackle deepfakes soon

By ETV Bharat Karnataka Team

Published : Nov 23, 2023, 2:09 PM IST

ನವದೆಹಲಿ: ಡೀಪ್ ಫೇಕ್​ಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಸ ಬೆದರಿಕೆಯಾಗಿವೆ ಎಂದು ಬಣ್ಣಿಸಿರುವ ಐಟಿ ಸಚಿವ ಅಶ್ವಿನಿ ವೈಷ್ಣವ್, ಡೀಪ್ ಫೇಕ್ ಗಳ ನಿಯಂತ್ರಣಕ್ಕೆ ಸರ್ಕಾರ ಶೀಘ್ರದಲ್ಲೇ ಹೊಸ ನಿಯಮಗಳನ್ನು ಜಾರಿ ಮಾಡಲಿದೆ ಎಂದು ಹೇಳಿದ್ದಾರೆ. ಡೀಪ್ ಫೇಕ್ ವಿಷಯದ ಬಗ್ಗೆ ಗುರುವಾರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮುಖ್ಯಸ್ಥರನ್ನು ಭೇಟಿಯಾದ ಸಚಿವರು ಡೀಪ್ ಫೇಕ್ ಪತ್ತೆ, ತಡೆಗಟ್ಟುವಿಕೆ, ವರದಿ ಮಾಡುವ ಕಾರ್ಯವಿಧಾನವನ್ನು ಬಲಪಡಿಸುವುದು ಮತ್ತು ಬಳಕೆದಾರರಲ್ಲಿ ಜಾಗೃತಿ ಹೆಚ್ಚಿಸುವಂತಹ ಕ್ಷೇತ್ರಗಳಲ್ಲಿ ಸ್ಪಷ್ಟ ಕ್ರಿಯಾತ್ಮಕ ಕೆಲಸದ ಅಗತ್ಯವನ್ನು ಕಂಪನಿಗಳು ಒಪ್ಪಿಕೊಂಡಿವೆ ಎಂದು ಹೇಳಿದರು.

"ನಾವು ಇಂದೇ ಡೀಪ್ ಫೇಕ್ ನಿಯಂತ್ರಣಕ್ಕಾಗಿ ನಿಯಮಗಳನ್ನು ರಚಿಸಲು ಪ್ರಾರಂಭಿಸುತ್ತೇವೆ ಮತ್ತು ಶೀಘ್ರದಲ್ಲಿಯೇ ನಾವು ಈ ನಿಯಮಗಳನ್ನು ಜಾರಿ ಮಾಡಲಿದ್ದೇವೆ ... ಇದು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ತಿದ್ದುಪಡಿ ಮಾಡುವ ಅಥವಾ ಹೊಸ ನಿಯಮಗಳನ್ನು ಅಥವಾ ಹೊಸ ಕಾನೂನನ್ನು ತರುವ ರೂಪದಲ್ಲಿರಬಹುದು" ಎಂದು ವೈಷ್ಣವ್ ಸುದ್ದಿಗಾರರಿಗೆ ತಿಳಿಸಿದರು.

ಡೀಪ್ ಫೇಕ್​ಗಳನ್ನು ಪತ್ತೆಹಚ್ಚಲು ವ್ಯಾಪಕ ತಂತ್ರಜ್ಞಾನಗಳು ಲಭ್ಯವಿವೆ ಎಂದು ಸಚಿವರು ಸಭೆಯಲ್ಲಿದ್ದ ತಜ್ಞರನ್ನು ಉಲ್ಲೇಖಿಸಿ ಹೇಳಿದರು. ಡೀಪ್ ಫೇಕ್ ಮಾಡುವ ಜನರು ಉತ್ತಮ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ ಮತ್ತು ಇದನ್ನು ತಡೆಗಟ್ಟುವಲ್ಲಿ ನಮಗೆ ಅದೇ ಮುಖ್ಯ ಸವಾಲಾಗಿರುತ್ತದೆ ಎಂದರು. ಸಭೆಯಲ್ಲಿ ವೀಡಿಯೋಗಳಿಗೆ ವಾಟರ್ ಮಾರ್ಕಿಂಗ್ ಮತ್ತು ಲೇಬಲ್ ಮಾಡುವ ಬಗ್ಗೆ ಚರ್ಚೆ ನಡೆಯಿತು. ಅಲ್ಲದೆ, ಡೀಪ್ ಫೇಕ್ ವೀಡಿಯೊಗಳನ್ನು ತಯಾರಿಸಲು ಅನುವು ಮಾಡಿಕೊಡುವ ಅಪ್ಲಿಕೇಶನ್​ಗಳನ್ನು ಬ್ಯಾನ್ ಮಾಡುವ ಬಗ್ಗೆಯೂ ಚರ್ಚೆ ನಡೆಯಿತು.

"ಡಿಸೆಂಬರ್ ಮೊದಲ ವಾರದಲ್ಲಿ ನಾವು ಮುಂದಿನ ಸಭೆ ನಡೆಸಲಿದ್ದೇವೆ. ಅದು ಇಂದಿನ ನಿರ್ಧಾರಗಳ ಮೇಲಿನ ಅನುಸರಣಾ ಕ್ರಮ ಮತ್ತು ಕರಡು ನಿಯಂತ್ರಣದಲ್ಲಿ ಏನನ್ನು ಸೇರಿಸಬೇಕು ಎಂಬುದರ ಬಗ್ಗೆಯೂ ಇರುತ್ತದೆ" ಎಂದು ವೈಷ್ಣವ್ ಹೇಳಿದರು. ಸಂಶ್ಲೇಷಿತ ಅಥವಾ ತಿರುಚಿದ ವೀಡಿಯೊಗಳನ್ನು ಡೀಪ್​ಫೇಕ್ ಎಂದು ಕರೆಯಲಾಗುತ್ತದೆ. ಇದನ್ನು ಡಿಜಿಟಲ್ ಆಗಿ ಕುಶಲತೆಯಿಂದ ನಿರ್ವಹಿಸಲಾಗುತ್ತದೆ ಮತ್ತು ಕೃತಕ ಬುದ್ಧಿಮತ್ತೆಯ ಒಂದು ರೂಪವನ್ನು ಬಳಸಿಕೊಂಡು ವ್ಯಕ್ತಿ ಅಥವಾ ವಿಷಯವನ್ನು ಬೇರೆ ರೀತಿಯಲ್ಲಿ ಅಥವಾ ತಪ್ಪಾಗಿ ತೋರಿಸಲು ಬದಲಾಯಿಸಲಾಗುತ್ತದೆ.

ಇತ್ತೀಚೆಗೆ ಪ್ರಮುಖ ನಟಿಯರ ಡೀಪ್ ಫೇಕ್ ವೀಡಿಯೊಗಳು ವೈರಲ್ ಆಗಿದ್ದವು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಕೂಡಲೇ ಮುಂದಾಗಬೇಕೆಂದು ಜನ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ಎಕ್ಸ್​ ಮತ್ತೆ ಪ್ರದರ್ಶಿಸಲಿದೆ ನ್ಯೂಸ್ ಪೋಸ್ಟ್​ಗಳ ಹೆಡ್​ಲೈನ್ಸ್​

ABOUT THE AUTHOR

...view details