ಬೀಜಿಂಗ್:ಚೀನಾವು ವೈರಸ್ಗಳ ತವರೂರಾಗುತ್ತಿದೆ. ಇದೀಗ ಇದೇ ದೇಶದಲ್ಲಿ ಲಂಗ್ಯಾ ಹೆನಿಪವೈರಸ್ ಎಂಬ ಹೊಸ ಝೂನೋಟಿಕ್ ವೈರಸ್ ಪತ್ತೆಯಾಗಿದೆ. ಇದು ತೀವ್ರವಾದ ಯಕೃತ್ತು ಮತ್ತು ಮೂತ್ರಪಿಂಡದ ಸೋಂಕು ಉಂಟುಮಾಡುವ ಸಾಮರ್ಥ್ಯ ಹೊಂದಿದೆಯಂತೆ. ಚೀನಾ ಮತ್ತು ಸಿಂಗಾಪುರದ ವಿಜ್ಞಾನಿಗಳ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಈಗಾಗಲೇ ಸುಮಾರು 35 ಜನರು ಈ ರೋಗ ಬಾಧೆಗೆ ಒಳಗಾಗಿದ್ದಾರೆ.
ಲಂಗ್ಯಾ ಹೆನಿಪವೈರಸ್ ಅನ್ನು ಇಲ್ಲಿನ ಜ್ವರ ರೋಗಿಗಳ ಗಂಟಲಿನ ಸ್ವ್ಯಾಬ್ ಮಾದರಿ ಪಡೆದು ಗುರುತಿಸಲಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಚೀನಾದ ಶಾಂಡಾಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ ತೀವ್ರವಾದ ಲೇವಿ ಸೋಂಕಿತ 35 ರೋಗಿಗಳು ಕಂಡುಬಂದಿದ್ದು, ಅವರಲ್ಲಿ ನಿಖರವಾಗಿ 26 ಜನರು ಈ ಹೊಸ ಸೋಂಕಿಗೆ ಒಳಗಾಗಿದ್ದರು.
ಯಾವ್ಯಾವ ಸಮಸ್ಯೆ ಕಾಣಿಸಿಕೊಳ್ಳುತ್ತವೆ?: ಸೋಂಕಿತರು ಜ್ವರದಿಂದ (ಶೇ. 100 ), ಆಯಾಸ (ಶೇ. 54), ಕೆಮ್ಮು (ಶೇ. 50), ಅನೋರೆಕ್ಸಿಯಾ (ಶೇ. 50), ಮೈಯಾಲ್ಜಿಯಾ (ಶೇ. 46), ವಾಕರಿಕೆ (ಶೇ. 38) ತಲೆನೋವು (ಶೇ. 35 ) ಮತ್ತು ವಾಂತಿ (ಶೇ. 35 ), ಥ್ರಂಬೋಸೈಟೋಪೆನಿಯಾ (ಶೇ 35 ), ಲ್ಯುಕೋಪೆನಿಯಾ (ಶೇ 54) ಮತ್ತು ದುರ್ಬಲಗೊಂಡ ಯಕೃತ್ತು (ಶೇ. 35 ) ಮತ್ತು ಮೂತ್ರಪಿಂಡದ (ಶೇ. 8) ಕಾರ್ಯಚಟುವಟಿಕೆಗಳ ಅಸಹಜತೆಗಳೊಂದಿಗೆ ಬಳಲಿದ್ದಾರೆ.
ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಝೂನೊಸಿಸ್‌ಗೆ (ಪ್ರಾಣಿಗಳಿಂದ ಮಾನವರಿಗೆ ಹರಡುವ ಸೋಂಕು) ಹೆನಿಪಾವೈರಸ್ ಹೆಚ್ಚಾಗುವ ಕಾರಣಗಳಲ್ಲಿ ಒಂದು. ಈ ತಳಿಯ ಹೆಂಡ್ರಾ ವೈರಸ್ (HeV) ಮತ್ತು ನಿಫಾ ವೈರಸ್ (NiV) ಹಣ್ಣುಗಳಿಂದ ಪಕ್ಷಿಗಳ ಮೂಲಕ ಮನುಷ್ಯರಿಗೆ ಹರಡುತ್ತದೆ ಎಂದು ತಿಳಿದುಬಂದಿದೆ.
ಕೊರೊನಾಗಿಂದ ಒಂದು ಹೆಜ್ಜೆ ಮುಂದು:ಈ ಎರಡೂ ವೈರಸ್‌ಗಳು ಬಾವಲಿಗಳ ಮೂಲಕವೇ ಹರಡುತ್ತವೆ. ಹೆನಿಪಾವೈರಸ್ ಪ್ರಾಣಿಗಳು ಮತ್ತು ಮನುಷ್ಯರಲ್ಲಿ ತೀವ್ರ ಸ್ವರೂಪದ ಆರೋಗ್ಯ ಸಮಸ್ಯೆ ಉಂಟುಮಾಡಬಹುದು.
ಸದ್ಯಕ್ಕೆ ಔಷಧ ಇಲ್ಲ: ಹೆನಿಪಾವೈರಸ್‌ಗೆ ಪ್ರಸ್ತುತ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಇಲ್ಲ. ಸೋಂಕನ್ನು ನಿರ್ವಹಿಸಲು ಆರೈಕೆ ಮಾತ್ರ ಚಿಕಿತ್ಸೆಯಾಗಿದೆ. ಲಂಗ್ಯಾ ಹೆನಿಪವೈರಸ್‌ನ ಪ್ರಕರಣಗಳು ಇಲ್ಲಿಯವರೆಗೆ ಮಾರಣಾಂತಿಕವಾಗಿಲ್ಲ ಅಥವಾ ತುಂಬಾ ಗಂಭೀರವಾಗಿಯೂ ಇಲ್ಲ. ಆದ್ದರಿಂದ ಭಯಪಡುವ ಅಗತ್ಯವಿಲ್ಲ ಎಂದು ಡ್ಯೂಕ್-ಎನ್‌ಯುಎಸ್ ವೈದ್ಯಕೀಯ ಪ್ರೊಫೆಸರ್ ವಾಂಗ್ ಲಿನ್ಫಾ ಹೇಳಿದ್ದಾರೆ. ಅದಾಗ್ಯೂ, ಪ್ರಕೃತಿಯಲ್ಲಿ ಅಸ್ತಿತ್ವದಲ್ಲಿರುವ ಅನೇಕ ವೈರಸ್‌ಗಳು ಮನುಷ್ಯರಿಗೆ ಸೋಂಕು ತಗುಲಿದಾಗ ಅವು ಅನಿರೀಕ್ಷಿತ ಫಲಿತಾಂಶಗಳನ್ನು ಹೊಂದಿರುವುದರಿಂದ ಎಚ್ಚರಿಕೆ ಅಗತ್ಯ ಎಂದು ವಾಂಗ್ ತಿಳಿಸಿದ್ದಾರೆ.
ಕೊರೊನಾವೇ ಅಂತಿಮವಲ್ಲ:ಲಂಗ್ಯಾ ಹೆನಿಪವೈರಸ್ ಮಾನವನಿಂದ ಮನುಷ್ಯನಿಗೆ ಹರಡುವುದು ಇನ್ನೂ ನಿಖರವಾಗಿ ಸಾಬೀತಾಗಿಲ್ಲ. ಆದರೂ ಹಿಂದಿನ ವರದಿಗಳು ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು ಎಂದು ಸೂಚಿಸುತ್ತವೆ. ಕೊರೊನಾ ವೈರಸ್ ಮಾತ್ರ ವಿಶ್ವಾದ್ಯಂತ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ಕೊನೆಯ ಸಾಂಕ್ರಾಮಿಕ ರೋಗವಲ್ಲ. ಏಕೆಂದರೆ ಹೊಸ ಸಾಂಕ್ರಾಮಿಕ ರೋಗಗಳು ಮಾನವನ ದೈನಂದಿನ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತಲೇ ಇರುತ್ತವೆ ಎಂದು ಫುಡಾನ್ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಹುವಾಶನ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಉಪ ಮುಖ್ಯ ವೈದ್ಯ ವಾಂಗ್ ಕ್ಸಿನ್ಯು ಕಂಡುಕೊಂಡಿದ್ದಾರೆ.
ಇದನ್ನೂ ಓದಿ: ತೆಲಂಗಾಣದ ಮಗುವಿಗೆ ಸ್ವಿಸ್ ಕಂಪನಿ ನೆರವಿನಿಂದ ₹ 16 ಕೋಟಿ ವೆಚ್ಚದ ಚಿಕಿತ್ಸೆ