ನವದೆಹಲಿ: ಹಿಂದಿನ ತಲೆಮಾರಿಗೆ ಹೋಲಿಸಿದರೆ ಭಾರತದಲ್ಲಿನ ಜೆನ್ ಝೆಡ್ (ನವಪೀಳಿಗೆ) ವೃತ್ತಿಪರರು ಕೃತಕ ಬುದ್ಧಿಮತ್ತೆ (ಎಐ) ಕೌಶಲ್ಯ ಕಲಿಯಲು ಹೆಚ್ಚು ಆಸಕ್ತಿ ಹೊಂದಿದ್ದಾರೆ ಮತ್ತು ಈ ಕೌಶಲ್ಯ ಕಲಿಯಲು ಇತರ ತಲೆಮಾರುಗಳಿಗಿಂತ ಶೇ 73ರಷ್ಟು ಹೆಚ್ಚು ಸಮಯ ವ್ಯಯಿಸುತ್ತಾರೆ ಎಂದು ಹೊಸ ವರದಿಯೊಂದು ಮಂಗಳವಾರ ತಿಳಿಸಿದೆ. ಜಾಗತಿಕ ವೃತ್ತಿಪರ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ ಲಿಂಕ್ಡ್ಇನ್ ಪ್ರಕಾರ, ಜೆನ್ ಝೆಡ್ ಹೊಸ ಕೌಶಲ್ಯ ಕಲಿತುಕೊಳ್ಳಲು ಜೆನ್ ಎಕ್ಸ್ಗಿಂತ 1.3 ಪಟ್ಟು ಹೆಚ್ಚು ಮತ್ತು ಬೇಬಿ ಬೂಮರ್ಗಳಿಗಿಂತ 2.4 ಪಟ್ಟು ಹೆಚ್ಚು ಸಮಯ ವ್ಯಯಿಸುತ್ತಿದೆ.
"ಎಐನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು, ನಾಯಕತ್ವ ಮತ್ತು ಸಮಸ್ಯೆ ಪರಿಹಾರದಂಥ ಪ್ರಮುಖ ಮಾನವ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಕಲಿಯುವುದು ಇನ್ನು ಮುಂದೆ ಒಂದು ಆಯ್ಕೆ ಮಾತ್ರವಾಗಿರದೆ ಅದು ಕಡ್ಡಾಯವಾಗಿದೆ" ಎಂದು ಲಿಂಕ್ಡ್ಇನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಅಶುತೋಷ್ ಗುಪ್ತಾ ಹೇಳಿದರು. ಡಿಸೆಂಬರ್ 2022 ರಿಂದ ಸೆಪ್ಟೆಂಬರ್ 2023 ರವರೆಗೆ ಜಾಗತಿಕ ಎಐ ಬಳಕೆ ಶೇಕಡಾ 70 ರಷ್ಟು ಹೆಚ್ಚಾಗಿದೆ ಎಂದು ವರದಿ ಬಹಿರಂಗಪಡಿಸಿದೆ.
ಭಾರತದಲ್ಲಿ ಹೊಸ ಕೌಶಲ್ಯ ಕಲಿಯುವ ವಿಚಾರದಲ್ಲಿ ಆದ್ಯತೆಗಳು ಪೀಳಿಗೆಯಿಂದ ಪೀಳಿಗೆಗೆ ಬದಲಾಗುತ್ತವೆ. ಜೆನ್ ಝೆಡ್ ಪೀಳಿಗೆ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ಗಳು, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡೇಟಾ ಅನಲಿಸಿಸ್ನಂಥ ಡಿಜಿಟಲ್ ಕೌಶಲ್ಯಗಳನ್ನು ಕಲಿಯುತ್ತಿದ್ದರೆ, ಮಿಲೇನಿಯಲ್ಸ್ ಮತ್ತು ಜೆನ್ ಎಕ್ಸ್ ನಾಯಕತ್ವ ಮತ್ತು ನಿರ್ವಹಣೆ, ವೈಯಕ್ತಿಕ ಪರಿಣಾಮಕಾರಿತ್ವ ಮತ್ತು ವೈಯಕ್ತಿಕ ಅಭಿವೃದ್ಧಿಯಂತಹ ಸಾಫ್ಟ್ ಸ್ಕಿಲ್ಗಳನ್ನು ಕಲಿಯಲು ಆಸಕ್ತಿ ಹೊಂದಿದ್ದಾರೆ.