ಶಿಲ್ಲಾಂಗ್ (ಮೇಘಾಲಯ): ಮೇಘಾಲಯದ ಸೌತ್ ಗಾರೋ ಹಿಲ್ಸ್ ಜಿಲ್ಲೆಯ ಗುಹೆಯೊಂದರ ಆಳದಲ್ಲಿ ಹೊಸ ಜಾತಿಯ (ಪ್ರಭೇದದ) ಕಪ್ಪೆಯನ್ನು ಭಾರತೀಯ ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ (ಝಡ್‌ಎಸ್‌ಐ) ಸಂಶೋಧಕರು ಕಂಡು ಹಿಡಿದಿದ್ದಾರೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಜರ್ನಲ್ ಒಂದರಲ್ಲಿ ಈ ಮಾಹಿತಿ ಪ್ರಕಟವಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಭಾರತದಲ್ಲಿ ಗುಹೆಯ ಆಳದಲ್ಲಿ ಹೊಸ ಪ್ರಭೇದದ ಕಪ್ಪೆಯೊಂದನ್ನು ಪತ್ತೆ ಮಾಡಿರುವುದು ಇದು ಎರಡನೇ ಬಾರಿಯಾಗಿದೆ. ಮೊದಲ ಬಾರಿಗೆ 2014 ರಲ್ಲಿ ತಮಿಳುನಾಡಿನ ಗುಹೆಯಿಂದ ಮೈಕ್ರಿಕ್ಸಾಲಸ್ ಸ್ಪೆಲುಂಕಾ ಪ್ರಭೇದದ ಕಪ್ಪೆ ಪತ್ತೆ ಮಾಡಲಾಗಿತ್ತು.
ಶಿಲ್ಲಾಂಗ್ ಮತ್ತ ಪುಣೆಯ ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ ಕಚೇರಿಯ ಸಂಶೋಧಕರು ದಕ್ಷಿಣ ಗಾರೋ ಹಿಲ್ಸ್ ಜಿಲ್ಲೆಯ ಸಿಜು ಗುಹೆಗಳ ಆಳದಲ್ಲಿ ಹೊಸ ಕ್ಯಾಸ್ಕೇಡ್ ರಾನಿಡ್ ಜಾತಿಯ ಕಪ್ಪೆಗಳನ್ನು ಕಂಡು ಹಿಡಿದಿದ್ದಾರೆ ಎಂದು ಸಂಶೋಧಕರಲ್ಲಿ ಒಬ್ಬರಾದ ಭಾಸ್ಕರ್ ಸೈಕಿಯಾ ಮಾಧ್ಯಮಕ್ಕೆ ತಿಳಿಸಿದರು. ಸಿಜು ಗುಹೆಯು 4 ಕಿಮೀ ಉದ್ದದ ನೈಸರ್ಗಿಕ ಸುಣ್ಣದ ಗುಹೆಯಾಗಿದ್ದು, ಕೋವಿಡ್-19 ಲಾಕ್‌ಡೌನ್‌ಗೆ ಕೆಲವು ತಿಂಗಳ ಮೊದಲು 2020 ರ ಜನವರಿಯಲ್ಲಿ ಸುಮಾರು 60 ರಿಂದ 100 ಮೀಟರ್ ಆಳದಲ್ಲಿ ಕಪ್ಪೆಯನ್ನು ಕಂಡುಹಿಡಿಯಲಾಯಿತು ಎಂದು ಅವರು ಹೇಳಿದರು.
ಹೊಸ ಪ್ರಭೇದದ ಕಪ್ಪೆಗೆ ಅಮೊಲೊಪ್ಸ್ ಸಿಜು ಎಂದು ಹೆಸರಿಸಲಲಾಗಿದೆ. ಕಪ್ಪೆಗಳು ಪತ್ತೆಯಾದ ಗುಹೆಗಳ ಹೆಸರನ್ನೇ ಹೊಸ ಪ್ರಭೇದಕ್ಕೆ ಇಡಲಾಗಿದೆ. ಹೊಸ ಪ್ರಭೇದಗಳ ವಿವರಣೆಯನ್ನು ಇರಾನ್ ಮೂಲದ ಲೊರೆಸ್ಟಾನ್ ವಿಶ್ವವಿದ್ಯಾಲಯದಿಂದ ಪ್ರಕಟವಾದ ಅಂತಾರಾಷ್ಟ್ರೀಯ ಸಂಶೋಧನಾ ಜರ್ನಲ್ ಆದ ಜರ್ನಲ್ ಆಫ್ ಅನಿಮಲ್ ಡೈವರ್ಸಿಟಿಯ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಯ ಪ್ರಕಾರ, ಕಪ್ಪೆ ಪ್ರಕೃತಿಯಲ್ಲಿ ರೂಪವಿಜ್ಞಾನದ ನಿಗೂಢ (morphologically cryptic) ಆಗಿರುವುದರಿಂದ, ಇತರ ಕ್ಯಾಸ್ಕೇಡ್ ಅಮೋಲೋಪ್ಸ್ ಕಪ್ಪೆಗಳ ಇತರ ತಿಳಿದಿರುವ ಜಾತಿಗಳಿಂದ ಅವುಗಳ ನಿರ್ದಿಷ್ಟ ಗುರುತನ್ನು ಖಚಿತಪಡಿಸಿಕೊಳ್ಳಲು ಮಾದರಿಗಳ ಅಂಗಾಂಶ ಮಾದರಿಗಳನ್ನು ಆಣ್ವಿಕ ಅಧ್ಯಯನಕ್ಕೆ ಒಳಪಡಿಸಲಾಯಿತು.