ಸಿಡ್ನಿ: ನೀವು ಮನಸ್ಸಿನಲ್ಲಿ ಅಂದುಕೊಂಡದ್ದನ್ನು ಸ್ಕ್ರೀನ್ ಮೇಲೆ ಬರೆದು ತೋರಿಸುವ ಕೃತಕ ಬುದ್ಧಿಮತ್ತೆ (ಎಐ) ಸಾಫ್ಟ್ವೇರ್ ಒಂದನ್ನು ಆಸ್ಟ್ರೇಲಿಯಾದ ಸಂಶೋಧಕರು ಕಂಡು ಹಿಡಿದಿದ್ದಾರೆ. ಇದು ಚಿಕ್ಕ ಗಾತ್ರದ್ದಾಗಿದ್ದು, ನಿಮ್ಮ ಖಾಸಗಿತನಕ್ಕೆ ಧಕ್ಕೆ ತರದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ನಿಮ್ಮ ಮೌನ ಆಲೋಚನೆಗಳನ್ನು ಡಿಕೋಡ್ ಮಾಡಿ ಅವನ್ನು ಪಠ್ಯವಾಗಿ ಪರಿವರ್ತಿಸುತ್ತದೆ. ಪಾರ್ಶ್ವವಾಯು ಸೇರಿದಂತೆ ಅನಾರೋಗ್ಯ ಅಥವಾ ಗಾಯದಿಂದಾಗಿ ಮಾತನಾಡಲು ಸಾಧ್ಯವಾಗದ ಜನರ ಸಂವಹನಕ್ಕೆ ಈ ತಂತ್ರಜ್ಞಾನ ಸಹಾಯ ಮಾಡಬಹುದು.
ಇದು ಬಯೋನಿಕ್ ಆರ್ಮ್ ಅಥವಾ ರೋಬೋಟ್ ಕಾರ್ಯಾಚರಣೆಯಂತಹ ಮಾನವ ಮತ್ತು ಯಂತ್ರಗಳ ನಡುವೆ ತಡೆರಹಿತ ಸಂವಹನಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಸಿಡ್ನಿ ವಿಶ್ವವಿದ್ಯಾಲಯದ (ಯುಟಿಎಸ್) ಗ್ರ್ಯಾಫೀನ್ಎಕ್ಸ್-ಯುಟಿಎಸ್ ಮಾನವ-ಕೇಂದ್ರಿತ ಕೃತಕ ಬುದ್ಧಿಮತ್ತೆ ಕೇಂದ್ರದ ಸಂಶೋಧಕರು ಇಂಥ ಆವಿಷ್ಕಾರ ಜಗತ್ತಿನಲ್ಲೇ ಮೊದಲನೆಯದು ಎಂದು ಹೇಳಿದ್ದಾರೆ.
ಅಧ್ಯಯನದಲ್ಲಿ ಭಾಗವಹಿಸಿದ್ದವರು ಎಲೆಕ್ಟ್ರೋಎನ್ಸೆಫಲೋಗ್ರಾಮ್ (ಇಇಜಿ) ಬಳಸಿ ತಮ್ಮ ನೆತ್ತಿಯ ಮೂಲಕ ಮೆದುಳಿನ ವಿದ್ಯುತ್ಕಾಂತೀಯ ಚಟುವಟಿಕೆಗಳನ್ನು ದಾಖಲಿಸುವ ಕ್ಯಾಪ್ ಧರಿಸಿದ್ದರು. ನಂತರ ಅವರು ತಮಗೆ ನೀಡಲಾದ ಪಠ್ಯವನ್ನು ಮೌನವಾಗಿ ಓದಿದರು.
ಇಇಜಿ ತರಂಗವನ್ನು ಮಾನವ ಮೆದುಳಿನಿಂದ ನಿರ್ದಿಷ್ಟ ಗುಣಲಕ್ಷಣಗಳು ಮತ್ತು ಮಾದರಿಗಳನ್ನು ಸೆರೆಹಿಡಿಯುವ ವಿಭಿನ್ನ ಘಟಕಗಳಾಗಿ ವಿಂಗಡಿಸಲಾಗಿದೆ. ಸಂಶೋಧಕರು ಅಭಿವೃದ್ಧಿಪಡಿಸಿದ ಡಿವೇವ್ ಎಂಬ ಎಐ ಮಾದರಿಯಿಂದ ಇದನ್ನು ಮಾಡಲಾಗುತ್ತದೆ. ದೊಡ್ಡ ಪ್ರಮಾಣದ ಇಇಜಿ ಡೇಟಾದಿಂದ ಕಲಿಯುವ ಮೂಲಕ ಡಿವೇವ್ ಇಇಜಿ ಸಂಕೇತಗಳನ್ನು ಪದಗಳು ಮತ್ತು ವಾಕ್ಯಗಳಾಗಿ ಭಾಷಾಂತರಿಸುತ್ತದೆ.