ಸ್ಯಾನ್ ಫ್ರಾನ್ಸಿಸ್ಕೋ: ಓಪನ್ ಎಐ ಸಿಇಒ ಆಗಿ ಸ್ಯಾಮ್ ಆಲ್ಟ್ ಮ್ಯಾನ್ ಅವರನ್ನು ಮರಳಿ ಕರೆತರುವ ಪ್ರಯತ್ನಗಳು ವಿಫಲವಾಗಿವೆ. ಈ ಕುರಿತಾದ ಒಪ್ಪಂದ ಮುರಿದುಬಿದ್ದಿದ್ದು, ಟ್ವಿಚ್ (Twitch) ಮಾಜಿ ಸಿಇಒ ಎಮ್ಮೆಟ್ ಶಿಯರ್ ಅವರನ್ನು ಚಾಟ್ ಜಿಪಿಟಿ ಡೆವಲಪರ್ ನ ಮಧ್ಯಂತರ ಸಿಇಒ ಆಗಿ ನೇಮಕ ಮಾಡುವ ಸಾಧ್ಯತೆ ಇದೆ. ದಿ ಇನ್ಫಾರ್ಮೇಶನ್ (The Information) ಪ್ರಕಾರ, ಆಲ್ಟ್ ಮ್ಯಾನ್ ಅವರನ್ನು ಮರಳಿ ಕರೆತರಲು ಕಂಪನಿಯ ಕಾರ್ಯನಿರ್ವಾಹಕರು ಪ್ರಯತ್ನಿಸಿದರಾದರೂ ಅದು ಸಫಲವಾಗಿಲ್ಲ.
ಅಮೆಜಾನ್ ಒಡೆತನದ ವೀಡಿಯೊ ಸ್ಟ್ರೀಮಿಂಗ್ ಸೈಟ್ ಟ್ವಿಚ್ನ ಸಹ-ಸಂಸ್ಥಾಪಕ ಶಿಯರ್ ಮಧ್ಯಂತರ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಓಪನ್ಎಐ ಸಹ-ಸಂಸ್ಥಾಪಕ ಮತ್ತು ಮಂಡಳಿಯ ನಿರ್ದೇಶಕ ಇಲ್ಯಾ ಸುಟ್ಸ್ಕೆವರ್ ಹೇಳಿದ್ದಾರೆ. ಈ ನಿರ್ಧಾರವು ಆಲ್ಟ್ ಮ್ಯಾನ್ ಅವರನ್ನು ಮಂಡಳಿಯಿಂದ ಹಠಾತ್ ಪದಚ್ಯುತಿಗೊಳಿಸಿದ್ದರಿಂದ ಮತ್ತು ಅಧ್ಯಕ್ಷ ಗ್ರೆಗ್ ಬ್ರಾಕ್ಮನ್ ಅವರನ್ನು ಮಂಡಳಿಯಿಂದ ತೆಗೆದುಹಾಕುವುದರಿಂದ ಉಂಟಾಗುವ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸ್ಯಾಮ್ ಅವರನ್ನು ಪದಚ್ಯುತಗೊಳಿಸುವ ನಿರ್ಧಾರವನ್ನು ಕಚೇರಿಯಲ್ಲಿ ಆಂತರಿಕವಾಗಿ ಘೋಷಿಸಿದ ಸ್ವಲ್ಪ ಸಮಯದ ನಂತರ ವಿಚಲಿತರಾದ ನೌಕರರು ಸ್ಯಾನ್ ಫ್ರಾನ್ಸಿಸ್ಕೋದ ಓಪನ್ಎಐ ಪ್ರಧಾನ ಕಚೇರಿಯಿಂದ ಕೆಲ ಕಾಲ ಹೊರಬಂದಿದ್ದರು.