ಕರ್ನಾಟಕ

karnataka

ETV Bharat / science-and-technology

ರಾಷ್ಟ್ರೀಯ ತಂತ್ರಜ್ಞಾನ ದಿನ: ₹5,800 ಕೋಟಿ ವೆಚ್ಚದ ಕಾರ್ಯಕ್ರಮಕ್ಕೆ ಪ್ರಧಾನಿ ಚಾಲನೆ

ಪರಮಾಣು ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ವಿಜ್ಞಾನಿಗಳ ಕೊಡುಗೆ ಸ್ಮರಿಸಿ ಅಂದಿನ ಪ್ರಧಾನಿ ವಾಜಪೇಯಿ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಘೋಷಿಸಿದರು.

National Technology Day significance theme and history
National Technology Day significance theme and history

By

Published : May 11, 2023, 11:28 AM IST

ಬೆಂಗಳೂರು:ದೇಶದೆಲ್ಲೆಡೆ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರಿಸಲಾಗುವುದು. ಈ ಮೂಲಕ ನಮ್ಮ ದೇಶದ ಅಭಿವೃದ್ಧಿಗೆ ವಿಜ್ಞಾನಿಗಳು ನೀಡಿದ ಕೊಡುಗೆಯನ್ನು ಸ್ಮರಿಸಲಾಗುವುದು. ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಸಲಹೆ ಮೇರೆಗೆ ಈ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.

ಪರಮಾಣು ಕ್ಷೇತ್ರದ ಕೊಡುಗೆ: ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್​ ಕಲಾಂ ಅವರ ನಿರಂತರ ಪ್ರಯತ್ನದಿಂದಾಗಿ ಭಾರತ ರಾಜಸ್ಥಾನದ ಪೋಖ್ರಾನ್​ನಲ್ಲಿ ಯಶಸ್ವಿಯಾಗಿ ಪರಮಾಣು​ ಪರೀಕ್ಷೆಯನ್ನು 1998ರಲ್ಲಿ ಮೇ 11ರಂದು ಭಾರತೀಯ ಸೇನೆ ಸಹಾಯದಿಂದ ನಡೆಸಲಾಯಿತು. ಆಪರೇಷನ್​ ಶಕ್ತಿ ಎಂಬ ಹೆಸರಿನಲ್ಲಿ ನಡೆದ ಪರೀಕ್ಷೆಯಲ್ಲಿ ಪೋಖ್ರಾನ್​ ಪರೀಕ್ಷಾ ಪ್ರದೇಶದಲ್ಲಿ ಏಕಕಾಲದಲ್ಲಿ ಐದು ಪರೀಕ್ಷೆಗಳು ಯಶಸ್ವಿಯಾದವು.

1974ರಲ್ಲಿ ನಡೆಸಿದ ಪರಮಾಣು ಪರೀಕ್ಷೆ ಬಳಿಕ ನಡೆದ ಎರಡನೇ ಯಶಸ್ವಿ ಪರೀಕ್ಷೆ ಇದಾಗಿತ್ತು. 1974ರಲ್ಲಿ ಆಪರೇಷನ್​ ಸ್ಮೈಲಿಂಗ್​ ಬುದ್ಧ ಅಥವಾ ಆಪರೇಷನ್​ ಸ್ಮೈಲಿಂಗ್​ ಕೃಷ್ಣ ಎಂಬ ಹೆಸರಿನಲ್ಲಿ ನಡೆಸಲಾಗಿತ್ತು. ಎರಡನೇ ಪರಮಾಣು ಪರೀಕ್ಷೆಯ ಪ್ರಮುಖ ಭಾಗವಾಗಿದ್ದ ಅಬ್ದುಲ್ ಕಲಾಂ ಮತ್ತು ಭಾರತೀಯ ಸೇನೆಯ ಪ್ರಯತ್ನಗಳಿಗೆ ಗೌರವಿಸುವ ಉದ್ದೇಶದಿಂದ ಪರೀಕ್ಷೆ ನಡೆಸಿದ ದಿನವನ್ನೇ ರಾಷ್ಟ್ರೀಯ ತಂತ್ರಜ್ಞಾನ ದಿನವೆಂದು ವಾಜಪೇಯಿ ಘೋಷಿಸಿದರು. 1999ರಂದು ತಾಂತ್ರಿಕ ಅಭಿವೃದ್ಧಿ ಮಂಡಳಿ ಇದನ್ನು ಜಾರಿಗೆ ತರುವ ಮೂಲಕ ತಂತ್ರಜ್ಞಾನದ ಕೊಡುಗೆಯನ್ನು ಸಾರಿತು.

ಮತ್ತೆರಡು ಪ್ರಯೋಗ: ಇದರ ಜೊತೆಗೆ ಮತ್ತೆರಡು ಪ್ರಮುಖ ಪ್ರಯೋಗಗಳು ಕೂಡ 1998 ಮೇ 11ಕ್ಕೆ ಸಾಕ್ಷಿಯಾದವು. ಇವು ಕೂಡ ಭಾರತದ ತಾಂತ್ರಿಕತೆಗೆ ಹೊಸ ಆಯಾಮ ನೀಡಿದವು. ಮೇ 11, 1998 ರಂದು ಮೊದಲ ಸ್ವದೇಶಿ ವಿಮಾನ ಹಂಸ-3 ಅನ್ನು ಬೆಂಗಳೂರಿನಲ್ಲಿ ಪರೀಕ್ಷಾರ್ಥವಾಗಿ ಹಾರಿಸಲಾಯಿತು. ಇದೇ ದಿನ ತ್ರಿಶೂಲ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಯು ನಡೆಸಲಾಯಿತು. ಈ ಮೂರು ಘಟನೆಗಳು ತಂತ್ರಜ್ಞಾನದ ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿದಿದೆ.

ಪ್ರತಿ ವರ್ಷ ಈ ರಾಷ್ಟ್ರೀಯ ತಾಂತ್ರಿಕ ವರ್ಷವನ್ನು ವಿವಿಧ ವಿಷಯಗಳು ಮತ್ತು ಘೋಷವಾಕ್ಯದ ಮೂಲಕ ಆಚರಿಸಲಾಗುವುದು. ಈ ಬಾರಿ ಅಂದರೆ 2023 ಈ ದಿನದ ಘೋಷವಾಕ್ಯ ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಮಗ್ರ ವಿಧಾನಗಳು ಎಂಬುದಾಗಿದೆ.

ಈ ಬಾರಿಯ ತಂತ್ರಜ್ಞಾನದ ದಿನ ವಿಶೇಷ:ಈ ವರ್ಷ 25ನೇ ವರ್ಷದ ರಾಷ್ಟ್ರೀಯ ತಂತ್ರಜ್ಞಾನದ ದಿನವನ್ನಾಗಿ ಆಚರಣೆ ಮಾಡಲಾಗುವುದು. ಇದರ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯ ಪ್ರಗತಿ ಮೈದಾನದಲ್ಲಿ ಈ ಸಂಭ್ರಮಾಚರಣೆ ಕಾರ್ಯವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ 5,800 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗೆ ಸಂಬಂಧಿಸಿದ ಅನೇಕ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸುವ ಎಕ್ಸ್‌ಪೋವನ್ನೂ ಪ್ರಧಾನಿ ಉದ್ಘಾಟಿಸಲಿದ್ದು, ಇದರ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯ ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ: ಗುಪ್ತವಾಗಿ ಮೈಕ್ರೊಫೋನ್​ ಡೇಟಾ ಕದಿಯುತ್ತಿದೆಯಾ ವಾಟ್ಸ್​ಆ್ಯಪ್? ತನಿಖೆ ನಡೆಸುತ್ತೇವೆ ಎಂದ ಕೇಂದ್ರ

ABOUT THE AUTHOR

...view details