ಚೆನ್ನೈ: ಭಾರತೀಯ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಅಮೆರಿಕ ನಿರ್ಧರಿಸಿದೆ. 1984ರಲ್ಲಿ ರಷ್ಯಾ ಭಾರತದ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಅದರ ನಂತರ ಈಗ ಅಮೆರಿಕ ಅಂಥದೇ ಯೋಜನೆ ರೂಪಿಸಿರುವುದು ಗಮನಾರ್ಹ. ಆದರೆ ಈ ಬಾರಿ ಅಮೆರಿಕವು ಮುಂದಿನ ವರ್ಷ ಭಾರತದ ಗಗನಯಾನಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಿದೆ. ಭಾರತದ ಸ್ವಂತ ಬಾಹ್ಯಾಕಾಶ ಕಾರ್ಯ ಯೋಜನೆಯಾದ ಗಗನಯಾನ್ ಗೂ ಬಹಳ ಮುಂಚೆಯೇ ಭಾರತೀಯ ಗಗನಯಾನಿಗಳು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ.
ಅಮೆರಿಕದ ಶ್ವೇತಭವನದ ಜಂಟಿ ಹೇಳಿಕೆಯ ಪ್ರಕಾರ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶ ವಲಯದಲ್ಲಿ ಎಲ್ಲ ರೀತಿಯ ಸಹಕಾರಕ್ಕಾಗಿ ಹೊಸ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ. ಭೂಮಿ ಮತ್ತು ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ನಮ್ಮ ಬೆಳೆಯುತ್ತಿರುವ ಸಹಕಾರವನ್ನು ಇಬ್ಬರೂ ನಾಯಕರು ಶ್ಲಾಘಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.
"2023 ರ ಅಂತ್ಯದ ವೇಳೆಗೆ ಮಾನವ ಬಾಹ್ಯಾಕಾಶ ಯಾನದ ಸಹಕಾರಕ್ಕಾಗಿ ಕಾರ್ಯತಂತ್ರದ ಚೌಕಟ್ಟನ್ನು ಅಭಿವೃದ್ಧಿಪಡಿಸಲು ನಾಸಾ (ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ) ಮತ್ತು ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಎರಡೂ ಸಂಸ್ಥೆಗಳ ಜಂಟಿ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ" ಎಂದು ಹೇಳಿಕೆ ತಿಳಿಸಿದೆ.
ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು 1984 ರಲ್ಲಿ ರಷ್ಯಾದ ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದರು ಎಂಬುದನ್ನು ಸ್ಮರಿಸಬಹುದಾಗಿದೆ. ಆದರೆ ಈಗ ಭಾರತದಿಂದ ಯಾರು ಅಮೆರಿಕದ ರಾಕೆಟ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಭಾರತದ ಗಗನ ಯಾನ್ ಕಾರ್ಯಕ್ರಮದ ಭಾಗವಾಗಿ ಈಗಾಗಲೇ ನಾಲ್ವರು ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಗಳು ರಷ್ಯಾದಲ್ಲಿ ಗಗನಯಾತ್ರಿ ತರಬೇತಿ ಪಡೆದಿದ್ದಾರೆ.