ವಾಷಿಂಗ್ಟನ್: ಜಗತ್ತಿನಾದ್ಯಂತ ಇರುವ ತ್ಯಾಜ್ಯ ಸಂಗ್ರಹಣಾ ಪ್ರದೇಶಗಳು ಹೊರಸೂಸುವ ಮೀಥೇನ್ ಅನ್ನು ಪತ್ತೆಹಚ್ಚಲು ನಾಸಾ ಸಂವೇದಕಗಳು ಶೀಘ್ರದಲ್ಲೇ ವಿಜ್ಞಾನಿಗಳಿಗೆ ಸಹಾಯ ಮಾಡಲಿವೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಕಾರ್ಬನ್ ಮ್ಯಾಪರ್ ಎಂಬ ಲಾಭದ ಉದ್ದೇಶವಿಲ್ಲದ ಗುಂಪಿನ ಹೊಸ ಯೋಜನೆಯು ನಾಸಾ ಉಪಕರಣಗಳು ಮತ್ತು ಡೇಟಾವನ್ನು ಜಗತ್ತಿನಾದ್ಯಂತ ತ್ಯಾಜ್ಯ ಸಂಗ್ರಹಣಾ ಪ್ರದೇಶಗಳಂಥ ಘನ ತ್ಯಾಜ್ಯ ಸ್ಥಳಗಳಿಂದ ಮಿಥೇನ್ ಹೊರಸೂಸುವಿಕೆ ಅಳೆಯಲು ಬಳಸಲಿದೆ.
ಪ್ರಸ್ತುತ ಜಾಗತಿಕ ತ್ಯಾಜ್ಯ ವಲಯದಿಂದ ಮೀಥೇನ್ ಹೊರಸೂಸುವಿಕೆಯ ಬಗ್ಗೆ ಇರುವ ಮಾಹಿತಿ ಬಹಳ ಸೀಮಿತವಾಗಿದೆ. ತ್ಯಾಜ್ಯ ತಾಣಗಳಿಂದ ಹೆಚ್ಚಿನ ಮಿಥೇನ್ ಹೊರಸೂಸುವಿಕೆ ಬಿಂದುಗಳ ಮೂಲಗಳ ಸಮಗ್ರ ತಿಳಿವಳಿಕೆಯಿಂದ ಅಂಥ ಹೊರಸೂಸುವಿಕೆ ತಗ್ಗಿಸಲು ನಿರ್ಣಾಯಕ ಹಂತವಾಗಿದೆ ಎಂದು ಕಾರ್ಬನ್ ಮ್ಯಾಪರ್ ಸಿಇಒ ರಿಲೆ ಡ್ಯುರೆನ್ ಹೇಳಿದರು.
ಹೊಸ ತಾಂತ್ರಿಕ ಸಾಮರ್ಥ್ಯಗಳು ಈ ಹೊರಸೂಸುವಿಕೆಯು ಸ್ಪಷ್ಟವಾಗಿ ಗೋಚರವಾಗುವಂತೆ ಮಾಡಲಿವೆ. ಹೀಗಾಗಿ ಈ ಒಂದು ಯೋಜನೆಯು ಕಾರ್ಯಸಾಧ್ಯವಾಗಿದ್ದು, ಈ ವಲಯದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿವೆ. ಇದರಿಂದ ಸಾಮಾನ್ಯವಾಗಿ ಕಡೆಗಣಿಸಲ್ಪಟ್ಟಿರುವ ವಲಯದಲ್ಲಿ ಅಲ್ಪಾವಧಿಯ ಅವಕಾಶಗಳ ಬಗ್ಗೆ ನಮ್ಮ ಸಾಮೂಹಿಕ ತಿಳಿವಳಿಕೆ ಹೆಚ್ಚಿಸುತ್ತದೆ ಎಂದು ಡ್ಯುರೆನ್ ತಿಳಿಸಿದರು.
ಇವು ಪಾಯಿಂಟ್-ಸೋರ್ಸ್ ಸಮೀಕ್ಷೆಯ ಭಾಗ:ಅರ್ತ್ ಸರ್ಫೇಸ್ ಮಿನರಲ್ ಡಸ್ಟ್ ಸೋರ್ಸ್ ಇನ್ವೆಸ್ಟಿಗೇಷನ್ (EMIT) ಮತ್ತು ಇತರ NASA ವಿಜ್ಞಾನ ಉಪಕರಣಗಳ ಅವಲೋಕನಗಳು ಜಾಗತಿಕ ತ್ಯಾಜ್ಯ ಸಂಗ್ರಹಣಾ ಪ್ರದೇಶಗಳ ಮೀಥೇನ್ ಹೊರಸೂಸುವಿಕೆಯ ಪಾಯಿಂಟ್-ಸೋರ್ಸ್ ಸಮೀಕ್ಷೆಯ ಭಾಗವಾಗಿವೆ. ಮಿಥೇನ್ ಪ್ರಬಲವಾದ ಹಸಿರುಮನೆ ಅನಿಲವಾಗಿದ್ದು, ಮಾನವರಿಂದ ಉಂಟಾಗುವ ಜಾಗತಿಕ ತಾಪಮಾನಕ್ಕೆ ಸರಿಸುಮಾರು ಕಾಲು ಭಾಗದಿಂದ ಮೂರನೇ ಒಂದು ಭಾಗ ಇದರಿಂದಲೇ ಆಗುತ್ತಿದೆ.