ಎಲೋನ್ ಮಸ್ಕ್ ಟ್ವಿಟರ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಮಾಡುತ್ತಿರುವ ಹೊಸ ಹೊಸ ಮಾರ್ಪಡುಗಳಿಗೆ ಕೊನೆಯಿಲ್ಲ. ಇದೀಗ ತಮ್ಮ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಮತ್ತೊಂದು ಹೊಸ ಬದಲಾವಣೆಯೊಂದನ್ನು ಮಾಡಿ ಗಮನ ಸೆಳೆದಿದ್ದಾರೆ. ಈ ಹಿಂದೆ ಸುದ್ದಿ ಅಥವಾ ಲೇಖನ (News and Article) ಓದುಗರು ತಮ್ಮ ಆಸಕ್ತಿ ವಿಷಯಗಳನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಲಾದ ಸುದ್ದಿ ಲಿಂಕ್ಗಳ ಮೂಲಕವೇ ಓದುವ ಅವಕಾಶವನ್ನು ನೀಡಲಾಗಿತ್ತು. ಆದರೆ, ಈ ಪದ್ದತಿಗೆ ಇದೀಗ ಮಸ್ಕ್ ಬ್ರೇಕ್ ಹಾಕಿದ್ದಾರೆ.
ಇನ್ಮುಂದೆ ಸುದ್ದಿ ಆರ್ಟಿಕಲ್ ಲಿಂಕ್ ಅನ್ನು ಹಂಚಿಕೊಂಡರೂ ಹೆಡ್ಲೈನ್ ಮತ್ತು ಸಂಪೂರ್ಣ ಸುದ್ದಿ ಓದಲು ಇರುವ ಲಿಂಕ್ ಇಲ್ಲದೇ, ಕೇವಲ ಫೋಟೋವನ್ನು ಮಾತ್ರ ಬಿಂಬಿಸುತ್ತದೆ. ಇದರಿಂದ ಬಳಕೆದಾರರು ಇದು ನ್ಯೂಸ್ ಅರ್ಟಿಕಲ್ ಎಂದು ಅರಿಯಲು ಕಷ್ಟವಾಗುವುದರ ಜೊತೆಗೆ ಸುದ್ದಿಯನ್ನು ಓದಲು ಸಾಧ್ಯವಿಲ್ಲ.
ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದ್ದು, ಐಒಎಸ್ ಬಳಕೆದಾರರು ತಮ್ಮ ಸುದ್ದಿ ಲಿಂಕ್ ಅನ್ನು ಪೋಸ್ಟ್ ಮಾಡಲು ಹೋದಾಗ ಅವರಿಗೆ ಈ ಸಮಸ್ಯೆ ಎದುರಾಗಿದೆ. ಅಲ್ಲದೇ, ಪೋಸ್ಟ್ ಮಾಡಿದಾಗ ಕೇವಲ ಇಮೇಜ್ ಮತ್ತು ಡೊಮೈನ್ ಹೆಸರು ಮಾತ್ರ ಕಾಣಿಸಿಕೊಂಡಿದೆ. ಸುದ್ದಿಯ ಹೆಡ್ಲೈನ್ ಹಾಗೂ ಲಿಂಕ್ ನಾಪತ್ತೆಯಾಗಿದೆ ಎಂದು ವರ್ಜ್ ವರದಿ ಮಾಡಿದೆ.
ಕಂಗಾಲಾದ ಬಳಕೆದಾರರು: ಈ ಬದಲಾವಣೆಯಿಂದಾಗಿ ಎಕ್ಸ್ ಬಳಕೆದಾರರು ಸುದ್ದಿಯ ತಲೆ ಬರಹ ಇಲ್ಲದೇ, ಕೇವಲ ಇಮೇಜ್ ಮತ್ತು ಡೊಮೈನ್ ಹೆಸರನ್ನು ನೋಡಿ ಏನಿದು ಎಂದು ತಿಳಿಯದೇ ಕೆಲವು ನಿಮಿಷ ಅಚ್ಚರಿಗೆ ಒಳಗಾದರು.