ನವದೆಹಲಿ: ಕೃತಕ ಬುದ್ಧಿಮತ್ತೆ ಮೂಲಕ ಈಗಾಗಲೇ ಒರಿಜಿನಲ್ ಚಿತ್ರ ಯಾವುದು, ಸ್ವಂತ ಚಿತ್ರ ಯಾವುದು ಎಂಬ ವ್ಯತ್ಯಾಸವೇ ಕಾಣದಂಗಾಗಿದೆ. ಈ ನಡುವೆ ಅನೇಕ ಮಂದಿ ಇಂತಹ ಕೃತಕ ಬುದ್ಧಿ ಮತ್ತೆ ಬಳಸಿಕೊಂಡು ತಮ್ಮದೇ ಕ್ರಿಯಾತ್ಮಕ ಫೋಟೋಗಳನ್ನು ರಚಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚಿಗೆ ಟೆಕ್ ದೈತ್ಯರನ್ನು ಸಾಮಾನ್ಯರ ರೀತಿ ಮಾಡಿದ ಚಿತ್ರಗಳು ಈ ಹಿಂದೆ ಸಾಕಷ್ಟು ವೈರಲ್ ಆಗಿದ್ದವು. ಇದೀಗ ಅದೇ ರೀತಿಯ ಮತ್ತೊಂದು ಚಿತ್ರ ವೈರಲ್ ಆಗಿದೆ. ಅದು ಜಗತ್ತಿನ ನಂಬರ್ 1 ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರದು ಎಂಬುದು ವಿಶೇಷ.
ದಿನನಿತ್ಯ ಅನೇಕ ಮಂದಿ ಜಗತ್ತಿನ ಮೂಲೆ ಮೂಲೆಯಲ್ಲಿ ಖ್ಯಾತರಾಗಿರುವವರನ್ನು ಮತ್ತೊಂದೆಡೆಯ ಸಂಸ್ಕೃತಿ, ಪರಿಸರಕ್ಕೆ ಹೊಂದಿಕೆಯಾಗುವಂತೆ ಚಿತ್ರಗಳನ್ನು ಈ ಎಐ ಮೂಲಕ ಮಾಡಲಾಗುತ್ತಿದೆ. ಅದರಂತೆ ಇದೀಗ ಟೆಸ್ಲಾ ಮಾಲೀಕನಾಗಿರುವ ಎಲೋನ್ ಮಸ್ಕ್ ಅವರನ್ನು ಭಾರತೀಯ ಉಡುಗೆಯಲ್ಲಿ ಮಿಂಚಿಸಿದ್ದಾರೆ. ಈ ಡಿಜಿಟಲ್ ಅವತಾರದಲ್ಲಿ ಮಸ್ಕ್ ಭಾರತೀಯ ಸಾಂಪ್ರದಾಯಿಕ ಶೇರ್ವಾನಿ ತೊಟ್ಟು ಮಿಂಚುತ್ತಿದ್ದಾರೆ. ಡೊಗೆಡಿಸೈನರ್ ಟ್ವೀಟರ್ ಪೇಜ್ನಿಂದ ಈ ಮಸ್ಕ್ ಅವರ ಭಾರತೀಯ ಧಿರಿಸಿನ ಚಿತ್ರ ವೈರಲ್ ಆಗಿದ್ದು, ಇದಕ್ಕೆ ಮಸ್ಕ್ ಕೂಡ ಪ್ರತಿಕ್ರಿಯಿಸಿರುವುದು ಮತ್ತೊಂದು ವಿಶೇಷವಾಗಿದೆ.
ಭಾರತೀಯ ಮದುವೆ ಸಂಭ್ರಮದಲ್ಲಿ ಎಲೋನ್ ಮಸ್ಕ್ ಕೂಡ ಶೆರ್ವಾನಿ ತೊಟ್ಟು ಹೆಜ್ಜೆ ಹಾಕುವಂತಹ ಪೋಸ್ ನೀಡುತ್ತಿದ್ದಾರೆ. ಈ ಫೋಟೋ ಕಂಡೊಡನೆ ಮಸ್ಕ್ ಐ ಲವ್ ಇಟ್ ಎಂದು ಪ್ರತಿಕ್ರಿಯಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಅನೇಕ ಮಂದಿ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಎಲೋನ್ ಮಸ್ಕ್ ಕಾಲಾ ಚಸ್ಮಾ ಹಾಡಿಗೆ ಸಿಂಕ್ ಮಾಡುವಂತೆ ಸಲಹೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು ಅತ್ಯದ್ಬುತ ಸಂಪ್ರದಾಯದ ಅದ್ಬುತ ದೇಶ ಎಂದು ಭಾರತವನ್ನು ಪ್ರಶಂಸಿದ್ದಾರೆ. ಮತ್ತೊಬ್ಬ ಬಳಕೆದಾರ, ಭಾರತೀಯ ಉಡುಗೆಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣುತ್ತಿದ್ದೀರಾ. ನೀವು ಭಾರತೀಯ ವರನಂತೆ ಮಿಂಚುತ್ತಿದ್ದಿರಾ ಎಂದಿದ್ದಾರೆ. ಶೆರವಾನಿಯಲ್ಲಿ ನಿಮ್ಮ ಮುಖದ ತುಂಬ ನಗು ನೋಡಿ ಖುಷಿಯಾಯಿತು. ಭಾರತ ಕೂಡ ನಿಮ್ಮನ್ನು ಪ್ರೀತಿಸುತ್ತದೆ ಎಂದಿದ್ದಾರೆ ಮತ್ತೊಬ್ಬ ಬಳಕೆದಾರರು.
ಕಳೆದ ತಿಂಗಳು, ಭಾರತೀಯ ತಿನಿಸಿನ ಬಗ್ಗೆ ಮುಕ್ತವಾಗಿ ಹೊಗಳಿದ್ದ ಮಸ್ಕ್, ಬಟರ್ ಚಿಕನ್ ಜೊತೆ ನಾನ್ ಬಲು ಇಷ್ಟ ಎಂದಿದ್ದರು. ಇದಾದ ಬಳಿಕ ಅನೇಕ ಭಾರತೀಯ ಟ್ವಿಟರ್ ಬಳಕೆದಾರರು ಅನೇಕ ಭಾರತೀಯ ಆಹಾರಗಳ ಆಯ್ಕೆಯನ್ನು ಮುಂದೆ ಇಟ್ಟರು. ಇಲ್ಲಿನ ಹೈದರಾಬಾದ್ ಬಿರಿಯಾನಿ, ದೋಸೆ ಮತ್ತು ಮನೆ ಅಡುಗೆಗಳ ಬಗ್ಗೆ ಕೂಡ ಶಿಫಾರಸು ಮಾಡಿದ್ದರು. ಟೆಸ್ಲಾ ಮೂಲಕ ಈಗಾಗಲೇ ಜಗತ್ತಿನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಅವರು ಭಾರತದಲ್ಲೂ ದೊಡ್ಡ ಮಟ್ಟದ ಫ್ಯಾಕ್ಟರಿ ಸ್ಥಾಪನೆಗೆ ಸ್ಥಳವನ್ನು ಹುಡುಕಾಟ ನಡೆಸುತ್ತಿದ್ದಾರೆ. ಎಲ್ಲವೂ ಸರಿಯಾದಲ್ಲಿ ಅವರು ಭಾರತದಲ್ಲಿ ಈ ಯೋಜನೆ ಜಾರಿಗೆ ಮುಂದಾಗಲಿದ್ದಾರೆ ಎಂದು ಕೂಡ ತಿಳಿಸಲಾಗಿದೆ.
ಕಳೆದು ತಿಂಗಳು ವಾಲ್ ಸ್ಟ್ರೀಟ್ ಜರ್ನಲ್ನಲ್ಲಿ, ಭಾರತದಲ್ಲಿ ಟೆಸ್ಲಾಗೆ ಸ್ಥಳದ ಆಯ್ಕೆ ಬಗ್ಗೆ ವಿಶೇಷ ಒಲವಿದೆಯಾ ಎಂದು ಪ್ರಶ್ನಿಸಿದಕ್ಕೆ ಉತ್ತರಿಸಿದ್ದ ಮಸ್ಕ್ ಖಂಡಿತ ಎಂದಿದ್ದರು. ವರದಿಗಳ ಪ್ರಕಾರ ಟೆಸ್ಲಾದ ಹಿರಿಯ ಕಾರ್ಯದರ್ಶಿಗಳು ಭಾರತಕ್ಕೆ ಆಗಮಿಸಿ, ಇಲ್ಲಿ ಅವರ ಇವಿ ಮಾರುಕಟ್ಟ ಉದ್ಯಮವನ್ನು ವಿಸ್ತರಿಸಲು ಯೋಜನೆಯನ್ನು ಹೊಂದಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಐಒಎಸ್ ಬೀಟಾ ಬಳಕೆದಾರರಿಗೆ ಹೊಸ ಅಪ್ಡೇಟ್ ನೀಡಿದ ವಾಟ್ಸ್ಆ್ಯಪ್; ಏನದು?