ನವದೆಹಲಿ: ಎಲೋನ್ ಮಸ್ಕ್ ಒಡೆತನದ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಶೀಘ್ರದಲ್ಲೇ ಬಳಕೆದಾರರು ಆಡಿಯೋ ಮತ್ತು ವಿಡಿಯೋ ಕಾಲ್ ವೈಶಿಷ್ಟ್ಯವನ್ನು ಪಡೆಯಬಹುದಾಗಿದೆ. ಇದು ಐಒಎಸ್, ಆಂಡ್ರಾಯ್ಡ್, ಮ್ಯಾಕ್ ಮತ್ತು ಪಿಸಿಗಳಿಗೂ ಬೆಂಬಲಿಸಲಿದೆ ಎಂದು ವರದಿ ತಿಳಿಸಿದೆ.
ಇನ್ನು, ಈ ವಿಡಿಯೋ ಮತ್ತು ಆಡಿಯೋ ಕಾಲಿಂಗ್ ಸೌಲಭ್ಯ ಪಡೆಯಲು ಫೋನ್ ಸಂಖ್ಯೆ ಕಡ್ಡಾಯವಾಗಿಲ್ಲ. ನಿಮ್ಮ ಫೋನ್ ನಂಬರ್ ನೀಡದೇ ಎಕ್ಸ್ನಲ್ಲಿರುವ ನಿಮ್ಮ ಸ್ನೇಹಿತರಿಗೆ ಇದೀಗ ವಿಡಿಯೋ ಚಾಟ್ ಮಾಡಿ ಮಾತನಾಡಬಹುದು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿರುವ ಮಸ್ಕ್, ಎಕ್ಸ್ನಲ್ಲಿ ವಿಡಿಯೋ ಮತ್ತು ಆಡಿಯೋ ಕಾಲ್ ಬರಲಿದೆ. ಇದು ಐಒಎಸ್, ಆಂಡ್ರಾಯ್ಡ್, ಮ್ಯಾಕ್ ಮತ್ತು ಪರ್ಸನಲ್ ಕಂಪ್ಯೂಟರ್ನಲ್ಲಿ ಕೆಲಸ ಮಾಡಲಿದೆ. ಈ ಕರೆ ಮಾಡಲು ಯಾವುದೇ ಫೋನ್ ನಂಬರ್ ಅವಶ್ಯಕತೆ ಇಲ್ಲ. ಎಕ್ಸ್ ಜಾಗತಿಕವಾಗಿ ಪರಿಣಾಮಕಾರಿ ಅಡ್ರೆಸ್ ಬುಕ್ ಆಗಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ, ಈ ಹೊಸ ಅಂಶವೂ ವಿಶಿಷ್ಟವಾಗಿರಲಿದೆ ಎಂದಿದ್ದಾರೆ. ಇನ್ನು ಯಾವಾಗಿನಿಂದ ಈ ವೈಶಿಷ್ಟ್ಯ ಲಭ್ಯವಿದೆ ಎಂಬುದರ ಕುರಿತು ಮಸ್ಕ್ ತಿಳಿಸಿಲ್ಲ. ಕಳೆದ ಜುಲೈನಲ್ಲಿ ಸಂಸ್ಥೆಯ ಡಿಸೈನರ್ ಆಂಡ್ರ್ಯೂ ಕೊನ್ವೆ ಈ ವೈಶಿಷ್ಟ್ಯವನ್ನು ಎಕ್ಸ್ಗೆ ಪರಿಯಿಸುವುದರ ಸುಳಿವನ್ನು ನೀಡಿದ್ದರು. ಈ ವೈಶಿಷ್ಟ್ಯ ಕುರಿತು ಅವರು ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದರು.