ನವದೆಹಲಿ: 2023ನೇ ವರ್ಷ ಕೊನೆಗೊಳ್ಳುತ್ತಿದ್ದಂತೆ ಈ ವರ್ಷ ಭಾರತದಲ್ಲಿ ಗೂಗಲ್ ಸರ್ಚ್ನಲ್ಲಿ ಜನ ಅತ್ಯಧಿಕ ಹುಡುಕಾಡಿದ ವಿಷಯಗಳಾವವು ಎಂಬ ಪಟ್ಟಿಯನ್ನು ಗೂಗಲ್ ಸೋಮವಾರ ಬಿಡುಗಡೆ ಮಾಡಿದೆ. ಈ ವರ್ಷ ಚಂದ್ರಯಾನ -3 ಮತ್ತು ಚಾಟ್ ಜಿಪಿಟಿ ಶಬ್ದಗಳನ್ನು ಜನ ಅತಿ ಹೆಚ್ಚಾಗಿ ಸರ್ಚ್ ಮಾಡಿದ್ದಾರೆ.
"ಚಂದ್ರಯಾನ -3 ರ ಐತಿಹಾಸಿಕ ಯಶಸ್ಸು ಈ ವರ್ಷದ ಅತ್ಯಂತ ಪ್ರಮುಖ ಸುದ್ದಿಯಾಗಿದೆ. ದೇಶ ವಿದೇಶಗಳಲ್ಲಿ ಜನ ಈ ಬಗ್ಗೆ ಬಹಳಷ್ಟು ಮಾಹಿತಿ ಜಾಲಾಡಿದ್ದಾರೆ" ಎಂದು ಗೂಗಲ್ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ. ಇನ್ನು What Is ಅಥವಾ ಹಾಗೆಂದರೇನು ಎಂಬ ಕೀ ವರ್ಡ್ನಿಂದ ಆರಂಭವಾಗುವ ಸರ್ಚ್ ವಿಚಾರದಲ್ಲಿ ಜಿ20 ಅಧ್ಯಕ್ಷತೆ (G20 presidency) ವಿಷಯ ಮುಂಚೂಣಿಯಲ್ಲಿದೆ.
ಇಸ್ರೇಲ್ ನ್ಯೂಸ್ ಮತ್ತು ಟರ್ಕಿ ಭೂಕಂಪದ ಬಗ್ಗೆ ತಿಳಿಯಲು ಪ್ರಯತ್ನಿಸಿದ್ದು, ಅದರ ಜೊತೆಗೆ ಕರ್ನಾಟಕ ಚುನಾವಣಾ ಫಲಿತಾಂಶಗಳು ಮತ್ತು ಏಕರೂಪ ನಾಗರಿಕ ಸಂಹಿತೆಯ ಬಗ್ಗೆಯೂ ಹೆಚ್ಚಾಗಿ ಹುಡುಕಾಡಿದ್ದಾರೆ. ಭಾರತದ ಜನರು ಮ್ಯಾಥ್ಯೂ ಪೆರ್ರಿ ('ಫ್ರೆಂಡ್ಸ್'ನ ಚಾಂಡ್ಲರ್ ಬಿಂಗ್ ಎಂದು ಹೆಸರುವಾಸಿಯಾಗಿದ್ದಾರೆ), ಮಣಿಪುರ ಸುದ್ದಿ ಮತ್ತು ಒಡಿಶಾ ರೈಲು ಅಪಘಾತಗಳ ಬಗ್ಗೆಯೂ ಹುಡುಕಿದ್ದಾರೆ.
ಗೂಗಲ್ನ ಟಾಪ್ ಟ್ರೆಂಡಿಂಗ್ 'ಹೌ ಟು' (How To) ದೊಂದಿಗೆ ಪ್ರಾರಂಭವಾಗುವ ಪ್ರಶ್ನೆಗಳ ಪೈಕಿ ಜನರು ಮನೆಮದ್ದುಗಳಿಂದ ಚರ್ಮ ಮತ್ತು ಕೂದಲಿಗೆ ಸೂರ್ಯನ ಹಾನಿಯನ್ನು ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ತಿಳಿಯಲು ಪ್ರಯತ್ನಿಸಿದ್ದಾರೆ. ಅನೇಕರು ಜುಡಿಯೋ, ಜಿಮ್ಗಳು, ಬ್ಯೂಟಿ ಪಾರ್ಲರ್ಗಳು ಮತ್ತು ಚರ್ಮರೋಗ ತಜ್ಞರ ಬಗ್ಗೆ ಮಾಹಿತಿ ಸರ್ಚ್ ಮಾಡಿದ್ದಾರೆ.