ನವದೆಹಲಿ : ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಭಾರತದ ಪ್ರಗತಿಗೆ ಚಿಪ್ ಚಾಲಿತ ಕಂಪ್ಯೂಟಿಂಗ್ ಶಕ್ತಿಗಿಂತ ನಮ್ಮ ತಾಂತ್ರಿಕ ಪ್ರತಿಭೆಯೇ ಕಾರಣ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
"ಹದಿನೈದು ವರ್ಷಗಳ ಹಿಂದೆ ಗೂಗಲ್ ಎಷ್ಟು ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಂಡಿತು ಅಥವಾ ಎಷ್ಟು ವಿದ್ಯಾರ್ಥಿಗಳು ವಿದೇಶಕ್ಕೆ ಹೋದರು ಎಂಬುದರ ಆಧಾರದ ಮೇಲೆ ಶೈಕ್ಷಣಿಕ ಸಂಸ್ಥೆಗಳನ್ನು ಅಳೆಯಲಾಗುತ್ತಿತ್ತು. ಆದರೆ ಈಗ ಒಂದು ನಿರ್ದಿಷ್ಟ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಜಗತ್ತಿಗೆ ಉಪಯೋಗವಾಗಬಲ್ಲ ಯಾವ ರೀತಿಯ ವೇದಿಕೆಗಳನ್ನು ನಿರ್ಮಿಸುತ್ತಿದ್ದಾರೆ ಎಂಬುದರ ಮೇಲೆ ಶೈಕ್ಷಣಿಕ ಸಂಸ್ಥೆಗಳನ್ನು ಅಳೆಯಲಾಗುತ್ತಿದೆ" ಎಂದು ಚಂದ್ರಶೇಖರ್ ಸಿಎನ್ಬಿಸಿ -ಟಿವಿ 18 ಮತ್ತು ಮನಿಕಂಟ್ರೋಲ್ ಗ್ಲೋಬಲ್ ಎಐ ಕಾನ್ಕ್ಲೇವ್ನಲ್ಲಿ ಹೇಳಿದರು.
"ಎಐ ತಂತ್ರಜ್ಞಾನದಲ್ಲಿ ಪ್ರತಿಭೆಯೇ ಅತ್ಯಂತ ಪ್ರಮುಖವಾಗಿದೆ. ನಮ್ಮ ವಿಶ್ವವಿದ್ಯಾಲಯಗಳು ಎಐ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್ಡಿ ತರಗತಿಗಳನ್ನು ಆರಂಭಿಸಬೇಕಿದೆ. ಪ್ರತಿಭೆಯ ಬಗ್ಗೆಯೇ ನಾನು ಹೆಚ್ಚಾಗಿ ಚಿಂತಿಸುತ್ತೇನೆ. ಇದರಿಂದ ಮೂಲಸೌಕರ್ಯ ವ್ಯವಸ್ಥೆಗಳನ್ನು ಬಹುಬೇಗನೆ ನಿರ್ಮಾಣ ಮಾಡಬಹುದು" ಎಂದು ಅವರು ತಿಳಿಸಿದರು.
ಗ್ಲೋಬಲ್ ಎಐ ಕಾನ್ಕ್ಲೇವ್ನಲ್ಲಿ ಎಐ ನಿಯಮ ಹಾಗೂ ಕಾನೂನುಗಳ ಬಗ್ಗೆಯೂ ಮಾತನಾಡಿದ ಚಂದ್ರಶೇಖರ್, ಎಐನ ಡೀಪ್ ಫೇಕ್ ತಂತ್ರಜ್ಞಾನದಿಂದ ಬಳಕೆದಾರರಿಗೆ ಉಂಟಾಗಬಹುದಾದ ಅಪಾಯಗಳನ್ನು ಎದುರಿಸಲು ನಿಯಮ ಆಧಾರಿತ ಜಾಗತಿಕ ಚೌಕಟ್ಟಿನ ಅಗತ್ಯವನ್ನು ಒತ್ತಿ ಹೇಳಿದರು.
ಎಐ ಕಂಪ್ಯೂಟಿಂಗ್ ವಲಯದಲ್ಲಿ ಜಾಗತಿಕ ಸ್ಪರ್ಧೆಯನ್ನು ಮುನ್ನಡೆಸುವ ಸುಧಾರಿತ ಚಿಪ್ ಗಳ ಪ್ರಸ್ತುತ ಕೊರತೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಸಚಿವರು ಹೇಳಿದರು. 2026 ರ ವೇಳೆಗೆ ಭಾರತದ ಟೆಕ್ ಆರ್ಥಿಕತೆಯನ್ನು ಟ್ರಿಲಿಯನ್ ಡಾಲರ್ಗೆ ಹೆಚ್ಚಿಸಲು ಎಐನಂಥ ಉದಯೋನ್ಮುಖ ತಂತ್ರಜ್ಞಾನಗಳಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸುವ ಸರ್ಕಾರದ ಪ್ರಯತ್ನಗಳ ಬಗ್ಗೆ ಅವರು ಸಮಾವೇಶದಲ್ಲಿ ಚರ್ಚಿಸಿದರು.
ಇದಕ್ಕೂ ಮುನ್ನ ರಾಜಧಾನಿ ದೆಹಲಿಯಲ್ಲಿ ನಡೆದ ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆ (ಜಿಪಿಎಐ) ಶೃಂಗಸಭೆಯ ಎರಡನೇ ದಿನದಂದು ಮಾತನಾಡಿದ್ದ ಸಚಿವ ರಾಜೀವ್ ಚಂದ್ರಶೇಖರ್, ಪ್ರತಿಭೆಯನ್ನು ಪೋಷಿಸುವುದು ಸರ್ಕಾರಗಳು ಸಹಾಯ ಮಾಡಬಹುದಾದ ವಿಷಯವಾಗಿದೆ. ಆದರೆ ಇದರಲ್ಲಿ ಸರ್ಕಾರ ಮಾತ್ರವೇ ಕೆಲಸ ಮಾಡಲಾಗದು. ಭವಿಷ್ಯದ ಉದ್ಯೋಗಗಳಿಗಾಗಿ ಉದ್ಯಮ ಮತ್ತು ಶಿಕ್ಷಣ ತಜ್ಞರು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ : ಚಂದ್ರಯಾನ್-3: ಈ ವರ್ಷದ ಟಾಪ್ ಟ್ರೆಂಡಿಂಗ್ ಯೂಟ್ಯೂಬ್ ವೀಡಿಯೊ