ನವದೆಹಲಿ : ತಪ್ಪು ಮಾಹಿತಿ ಹರಡುವಿಕೆ, ದುಷ್ಟ ಬಳಕೆದಾರರ ಹೆಚ್ಚಳ ಮತ್ತು ಬಾಟ್ಗಳ ಹಸ್ತಕ್ಷೇಪಗಳನ್ನು ತಡೆಯಲಾಗದೆ 2025ರ ವೇಳೆಗೆ ಶೇ 50ಕ್ಕೂ ಹೆಚ್ಚು ಗ್ರಾಹಕರು ಸಾಮಾಜಿಕ ಮಾಧ್ಯಮಗಳಿಂದ ದೂರ ಹೋಗಲಿದ್ದಾರೆ ಅಥವಾ ಅವುಗಳ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದ್ದಾರೆ ಎಂದು ವರದಿ ಹೇಳಿದೆ. ಹಿಂದಿನ ವರ್ಷ ಅಥವಾ ಐದು ವರ್ಷಗಳ ಹಿಂದೆ ಹೋಲಿಸಿದರೆ ಸಾಮಾಜಿಕ ಮಾಧ್ಯಮದ ಪ್ರಸ್ತುತ ಸ್ಥಿತಿ ಹಾಳಾಗಿದೆ ಎಂದು ಶೇಕಡಾ 53 ರಷ್ಟು ಗ್ರಾಹಕರು ನಂಬಿದ್ದಾರೆ ಎಂದು ಗಾರ್ಟ್ನರ್ ಸಮೀಕ್ಷೆ ಕಂಡುಹಿಡಿದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಜೆನ್ ಎಐ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ ಮತ್ತು ಇದರಿಂದ ಸಾಮಾಜಿಕ ಮಾಧ್ಯಮಗಳು ಬಳಕೆದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಪ್ರತಿ 10 ರಲ್ಲಿ 7 ಬಳಕೆದಾರರ ಅಭಿಪ್ರಾಯವಾಗಿದೆ. "ಸಾಮಾಜಿಕ ಮಾಧ್ಯಮವು ಡಿಜಿಟಲ್ ಮಾರ್ಕೆಟಿಂಗ್ನ ಪ್ರಮುಖ ಮೂಲವಾಗಿದೆಯಾದರೂ ಗ್ರಾಹಕರು ಮಾತ್ರ ತಮ್ಮ ಸಾಮಾಜಿಕ ಮಾಧ್ಯಮದ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಗಾರ್ಟ್ನರ್ ಮಾರ್ಕೆಟಿಂಗ್ ವಿಭಾಗದ ಹಿರಿಯ ಪ್ರಧಾನ ಸಂಶೋಧಕ ಎಮಿಲಿ ವೈಸ್ ಹೇಳಿದರು.
"ಕಳೆದ ಕೆಲ ವರ್ಷಗಳ ಹಿಂದೆ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವೈಯಕ್ತಿಕ ಜೀವನದ ಮಾಹಿತಿಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದರು. ಆದರೆ ಆ ಟ್ರೆಂಡ್ ಈಗ ಕಡಿಮೆಯಾಗುತ್ತಿದೆ. ಹೀಗಾಗಿ ಕಂಪನಿಗಳ ಮಾರ್ಕೆಟಿಂಗ್ ತಜ್ಞರು ತಮ್ಮ ಮಾರ್ಕೆಟಿಂಗ್ ತಂತ್ರಗಾರಿಕೆಯನ್ನು ಬದಲಾಯಿಸಿಕೊಳ್ಳುವ ಅಗತ್ಯ ಉಂಟಾಗಿದೆ” ಎಂದು ಎಮಿಲಿ ವೈಸ್ ತಿಳಿಸಿದರು.