ನವದೆಹಲಿ:ಲ್ಯಾಂಡಿಂಗ್ ಸಮಸ್ಯೆಯಿಂದಾಗಿ 2019ರಲ್ಲಿ ಹಾರಿಸಲಾದ ಚಂದ್ರಯಾನ-2 ವೈಫಲ್ಯ ಕಂಡಿತ್ತು. ಅದು ಈ ಬಾರಿ ಮರುಕಳಿಸದಂತೆ ಹೆಚ್ಚುವರಿ ಇಂಧನ ವ್ಯವಸ್ಥೆ, ಸುರಕ್ಷತಾ ಕ್ರಮ, ಸೂಕ್ಷ್ಮ ಲ್ಯಾಂಡಿಂಗ್ ಸೇರಿದಂತೆ 'ವೈಫಲ್ಯ ಆಧಾರಿತ ವಿನ್ಯಾಸ'ದ ಮೇಲೆ ಚಂದ್ರಯಾನ-3 ನೌಕೆಯನ್ನು ರೂಪಿಸಲಾಗಿದೆ. ಎಲ್ಲವೂ ನಿಗದಿಯಂತೆ ಜರುಗಿದರೆ, ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಎಲ್ವಿಎಂ ಉಡಾವಣಾ ವಾಹಕದ ಮೂಲಕ ನಭಕ್ಕೆ ಜಿಗಿಯಲಿದೆ.
ಕಳೆದ ಬಾರಿ ಆದ ಸಣ್ಣ ಪ್ರಮಾದದಿಂದಾಗಿ ಇಡೀ ಯೋಜನೆಯೇ ವಿಫಲವಾಗಿತ್ತು. ಆ ವೈಫಲ್ಯದ ಮೇಲೆಯೇ ಇಸ್ರೋ ದೀರ್ಘ ಅಧ್ಯಯನ ನಡೆಸಿ ಚಂದ್ರಯಾನ-3 ಯೋಜನೆಗೆ ಸಕಲ ಸಿದ್ಧತೆ ನಡೆಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ್ ಅವರು, ಚಂದ್ರಯಾನ-2 ರ 'ಯಶಸ್ಸು ಆಧಾರಿತ ವಿನ್ಯಾಸ'ದ ಬದಲಿಗೆ, ಚಂದ್ರಯಾನ-3 ರಲ್ಲಿ 'ವೈಫಲ್ಯ ಆಧಾರಿತ ವಿನ್ಯಾಸ'ವನ್ನು ರೂಪಿಸಲಾಗಿದೆ. ವಿಫಲತೆ ಹೊಂದುವ ಸೂಚನೆಗಳಿದ್ದರೆ, ಅದನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಮೇಲೆ ಇದು ಕೇಂದ್ರೀಕೃತವಾಗಿದೆ. ಯಶಸ್ವಿ ಲ್ಯಾಂಡಿಂಗ್ ಮಾಡುವುದನ್ನು ಇದು ಹೊಂದಿದೆ ಎಂದು ತಿಳಿಸಿದರು.
ಇಸ್ರೋ ಹಲವು ವೈಫಲ್ಯಗಳನ್ನು ಕಂಡಿದೆ. ಕೆಲವೊಮ್ಮೆ ನೌಕೆಗಳಲ್ಲಿ ಸಂವೇದಕ ವೈಫಲ್ಯ, ಇಂಜಿನ್, ಅಲ್ಗಾರಿದಮ್, ತಪ್ಪು ಲೆಕ್ಕಾಚಾರ ಸೇರಿದಂತೆ ಹಲವು ಕಾರಣಗಳಿಗೆ ಲ್ಯಾಂಡಿಂಗ್ ವಿಫಲವಾಗಿದೆ. ಈ ಯೋಜನೆಯಲ್ಲಿ ಇದೆಲ್ಲವನ್ನೂ ಮೀರಿದ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲಾಗಿದೆ. ನಿಖರ ವೇಗದಲ್ಲಿಯೇ ನೌಕೆ ಇಳಿಸಲು ನಾವು ಬಯಸುತ್ತೇವೆ. ಹಾಗಾಗಿ ವಿಭಿನ್ನ ವೈಫಲ್ಯದ ಸನ್ನಿವೇಶಗಳನ್ನು ಲೆಕ್ಕಹಾಕಲಾಗಿದೆ. ಅವೆಲ್ಲವುಗಳ ಮೇಲೆ ಪ್ರೋಗ್ರಾಮ್ ರೂಪಿಸಲಾಗಿದೆ ಎಂದು ಅವರು ಹೇಳಿದರು.
ಇಂಧನ, ಲ್ಯಾಂಡಿಂಗ್ ಜಾಗ ವಿಸ್ತರಣೆ:ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಪ್ರದೇಶವನ್ನು 500m x 500m ನಿಗದಿ ಮಾಡಲಾಗಿತ್ತು. ಇದನ್ನೀಗ 4 ಕಿಮೀ ನಿಂದ 2.5 ಕಿಮಿಗೆ ವಿಸ್ತರಿಸಲಾಗಿದೆ. ಇಷ್ಟು ಜಾಗದಲ್ಲಿ ಅದು ಎಲ್ಲಿಯಾದರೂ ಇಳಿಯಬಹುದು. ಇದು ನಿರ್ದಿಷ್ಟ ಬಿಂದುವಿನ ಮಿತಿ ಇರುವುದಿಲ್ಲ. ನೌಕೆಯೇ ಸ್ವಯಂ ನಿರ್ಧಾರ ಕೈಗೊಳ್ಳುವ ವಿಶೇಷ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಸೋಮನಾಥ್ ಹೇಳಿದರು.