ಬೆಂಗಳೂರು:ಚಂದ್ರನ ದಕ್ಷಿಣ ಧ್ರುವದ ಶಿವಶಕ್ತಿ ಪಾಯಿಂಟ್ನ ಸುತ್ತಲೂ ಕಾರ್ಯಾಚರಣೆ ಆರಂಭಿಸಿರುವ ಪ್ರಜ್ಞಾನ್ ರೋವರ್ ಮಣ್ಣಿನ ತಾಪಮಾನವನ್ನು ಅಳೆಯುತ್ತಿದೆ. ಚಂದ್ರನ ಮೇಲ್ಮೈ ಪ್ರದೇಶದ 10 ಸೆಂ.ಮೀ ಆಳದಲ್ಲಿ ಸೆನ್ಸಾರ್ಗಳನ್ನು ಕಳುಹಿಸಿದ್ದು, ತಾಪ ಎಷ್ಟಿದೆ ಎಂಬುದನ್ನು ಲೆಕ್ಕ ಹಾಕುತ್ತಿದೆ. ಈ ಮೂಲಕ ಚಂದ್ರಯಾನ-3 ಯೋಜನೆಯ ಮೂರನೇ ಉದ್ದೇಶವೂ ಸಫಲತೆ ಕಾಣುತ್ತಿದೆ ಎಂದು ಇಸ್ರೋ ತಿಳಿಸಿದೆ.
ಆಗಸ್ಟ್ 23 ರಂದು ಲ್ಯಾಂಡರ್ ಚಂದ್ರನ ಮೇಲೆ ಇಳಿದು ಮೊದಲ ಉದ್ದೇಶ ಪೂರ್ಣಗೊಂಡಿತ್ತು. ಬಳಿಕ ಅದರಲ್ಲಿನ ಪ್ರಜ್ಞಾನ್ ರೋವರ್ ಸಂಚಾರ ಆರಂಭಿಸಿ ಎರಡನೇ ಉದ್ದೇಶವೂ ಸಾಕಾರವಾಗಿತ್ತು. ಮೂರನೇ ಮತ್ತು ಮುಖ್ಯ ಉದ್ದೇಶವಾದ ಅಲ್ಲಿನ ವಾತಾವರಣ ಅಧ್ಯಯನದ ಬಗ್ಗೆಯೂ ರೋವರ್ ಕೆಲಸ ಮಾಡುತ್ತಿದ್ದು, ವಿಜ್ಞಾನಿಗಳು ಅಂದುಕೊಂಡಂತೆ ಎಲ್ಲ ಕಾರ್ಯಗಳೂ ಸಾಂಗವಾಗಿ ನಡೆಯುತ್ತಿವೆ.
ತಾಪಮಾನ ಅಧ್ಯಯನ:ಶತಮಾನಗಳಿಂದ ಬೆಳಕನ್ನೇ ಕಾಣದ ಕಗ್ಗತ್ತಲ ಖಂಡವಾದ ಚಂದ್ರನ ದಕ್ಷಿಣ ಧ್ರುವದ ತಾಪಮಾನದ ಬಗ್ಗೆ ಇರುವ ಕೌತುಕವನ್ನು ರೋವರ್ ಬೇಧಿಸಲು ಶುರು ಮಾಡಿದೆ. 10 ಸೆಂಟಿ ಮೀಟರ್ ಆಳದವರೆಗೂ ಸೆನ್ಸಾರ್ಗಳನ್ನು ಕಳುಹಿಸಿ ಲೆಕ್ಕ ಹಾಕುತ್ತಿದೆ. ಅಧ್ಯಯನದ ಅಂಶಗಳನ್ನು ಇನ್ನಷ್ಟೇ ಪ್ರಜ್ಞಾನ್ ಭೂಮಿಗೆ ರವಾನಿಸಬೇಕಿದೆ. ಲ್ಯಾಂಡಿಂಗ್ ಆದ ನಾಲ್ಕು ದಿನಗಳ ನಂತರ ರೋವರ್ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದು, ಇದರ ಆರಂಭಿಕ ಮಾಹಿತಿಯನ್ನು ಇಸ್ರೋ ಎಕ್ಸ್ನಲ್ಲಿ(ಹಿಂದಿನ ಟ್ವಿಟರ್) ಹಂಚಿಕೊಂಡಿದೆ. ಚಂದ್ರನ ದಕ್ಷಿಣ ಧ್ರುವದ ಮಣ್ಣಿನ ತಾಪಮಾನದ ಪ್ರೊಫೈಲಿಂಗ್‌ನ ಮೊದಲ ನಿದರ್ಶನವನ್ನು ಇದು ಸೂಚಿಸುತ್ತದೆ.
ಚಂದ್ರನ ಮೇಲ್ಮೈಯ 10 ಸೆಂಟಿ ಮೀಟರ್ ಆಳದಲ್ಲಿ ತಾಪಮಾನ ಏರಿಳಿತಗಳನ್ನು ತಿಳಿಸುವ ಗ್ರಾಫ್ ಅನ್ನು ಇಸ್ರೋ ಬಿಡುಗಡೆ ಮಾಡಿದೆ. 'ChaSTE' ಎಂಬ ಪೆಲೋಡ್ (ಚಂದ್ರನ ಮೇಲ್ಮೈ ಥರ್ಮೋಫಿಸಿಕಲ್ ಅಧ್ಯಯನ) ಪ್ರಯೋಗ ನಡೆಸುತ್ತಿದ್ದು, ಧ್ರುವದಲ್ಲಿ ಚಂದ್ರನ ಮೇಲ್ಮಣ್ಣಿನ ತಾಪಮಾನವನ್ನು ಗುಣಿಸುತ್ತಿದೆ. ಇದು ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳ ಮಾಹಿತಿಯನ್ನು ನೀಡುತ್ತದೆ.
ಈಗ ಹಂಚಿಕೊಳ್ಳಲಾದ ಗ್ರಾಫ್‌ನಲ್ಲಿ ಪ್ರತಿ ಹತ್ತು ಸೆಂಟಿಮೀಟರ್ಗೆ ತಾಪಮಾನ ಬದಲಾಗುತ್ತಿರುವುದು ಕಾಣಿಸುತ್ತದೆ. ವಿವಿಧ ಆಳಗಳಲ್ಲಿ ತಾಪಮಾನ ವ್ಯತ್ಯಾಸಗಳನ್ನು ಇದು ವಿವರಿಸುತ್ತದೆ. ಇನ್ನೂ ಹೆಚ್ಚಿನ ಅಧ್ಯಯನದ ಬಳಿಕ ದಕ್ಷಿಣ ಧ್ರುವದ ಇನ್ನಷ್ಟು ವಿವರಗಳು ಲಭ್ಯವಾಗಲಿವೆ ಎಂದು ಇಸ್ರೋ ತಿಳಿಸಿದೆ. ಈಗಿನ ಗ್ರಾಫ್‌ನಲ್ಲಿ ಚಿತ್ರಿಸಿದಂತೆ ತಾಪಮಾನದ ವ್ಯಾಪ್ತಿಯು -10 ಡಿಗ್ರಿ ಸೆಲ್ಸಿಯಸ್‌ನಿಂದ 60 ಡಿಗ್ರಿ ಸೆಲ್ಸಿಯಸ್‌ವರೆಗೆ ಇದೆ.
ಚಂದ್ರಯಾನ- 3 ಯಲ್ಲಿ ಏಳು ಪೇಲೋಡ್:ಚಂದ್ರನ ಅಧ್ಯಯನ ಯೋಜನೆಯಲ್ಲಿ 7 ಪೆಲೋಡ್ಗಳನ್ನು ರೂಪಿಸಲಾಗಿದೆ. ವಿಕ್ರಮ್ ಲ್ಯಾಂಡರ್‌ನಲ್ಲಿ ನಾಲ್ಕು, ಪ್ರಜ್ಞಾನ್ ರೋವರ್‌ನಲ್ಲಿ ಎರಡು ಮತ್ತು ಪ್ರೊಪಲ್ಷನ್ ಮಾಡ್ಯೂಲ್ನಲ್ಲಿ ಒಂದು ಪೇಲೋಡ್ ಇದೆ. ಇವನ್ನು ವಿವಿಧ ರೀತಿಯ ವೈಜ್ಞಾನಿಕ ಅಧ್ಯಯನಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ChaSTE ಜೊತೆಗೆ ಲ್ಯಾಂಡರ್ನಲ್ಲಿರುವ RAMBHA ಪೆಲೋಡ್ ಚಂದ್ರನ ಮಣ್ಣನ್ನು ವಿಶ್ಲೇಷಿಸುತ್ತದೆ. ಅಂದರೆ, ಮಣ್ಣಿನಲ್ಲಿನ ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಅಧ್ಯಯನ ಮಾಡುತ್ತದೆ. ILSA ಪೆಲೋಡ್ ಭೂಕಂಪನ ವಿದ್ಯಮಾನ, LRA ಪೆಲೋಡ್ ಚಂದ್ರನ ಸಿಸ್ಟಮ್ ಡೈನಾಮಿಕ್ಸ್ ಬಗ್ಗೆ ಪ್ರಯೋಗ ನಡೆಸಲಿದೆ.
ಇದನ್ನೂ ಓದಿ:Chandrayaan-3.. 'ಶಿವಶಕ್ತಿ ಪಾಯಿಂಟ್'ನಲ್ಲಿ ಓಡಾಡುತ್ತಿರುವ ಪ್ರಜ್ಞಾನ್ ರೋವರ್.. ತಾಜಾ ವಿಡಿಯೋ ಹಂಚಿಕೊಂಡ ಇಸ್ರೋ