ಖಗೋಳ ಭೌತಶಾಸ್ತ್ರಜ್ಞರು ಮತ್ತು ಹವ್ಯಾಸಿ ಗಗನವೀಕ್ಷಕರು ಇತ್ತೀಚೆಗೆ ಚಂದ್ರನ ಸನಿಹದಲ್ಲಿರುವ ಗ್ರಹವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ. ಚಂದ್ರ ಮತ್ತು ಶುಕ್ರ ಗ್ರಹವು ಅತ್ಯಂತ ಸಮೀಪದಲ್ಲಿ ಗೋಚರಿಸಿದ ಅಪರೂಪದ ಘಟನೆ ಶುಕ್ರವಾರ ಸಂಜೆ ಬಾನಂಗಳದಲ್ಲಿ ಕಂಡುಬಂದಿದೆ. ಇದಾದ ಕೆಲಹೊತ್ತಲ್ಲಿ ಕ್ರಮೇಣ ಶುಕ್ರವು ಚಂದ್ರನ ಹಿಂದೆ ಕಣ್ಮರೆಯಾಯಿತು. ಇವೆರಡೂ ಗ್ರಹಗಳು ಮೈಲುಗಳಷ್ಟು ದೂರದಲ್ಲಿದ್ದರೂ ಸಹ ಅವು ಒಟ್ಟಿಗೆ ಪರಸ್ಪರ ಜೋಡಿಸಲ್ಪಟ್ಟಂತೆ ಭಾಸವಾಗುತ್ತಿದ್ದವು. ಎರಡು ಆಕಾಶಕಾಯಗಳು ಪರಸ್ಪರ ಹತ್ತಿರ ಕಾಣಿಸಿಕೊಂಡಾಗ 'ಅಪರೂಪದ ಗ್ರಹಗಳ ಸಂಯೋಗ' ಸಂಭವಿಸುತ್ತದೆ.
ಈ ದೃಶ್ಯದ ಕೆಲವು ಫೋಟೋಗಳನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ(ಯುಎಸ್‌ಎ) ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. "ಸೂರ್ಯಾಸ್ತದ ನಂತರ ಚಂದ್ರ ಸುಂದರ, ತೆಳ್ಳನೆಯ ಅರ್ಧಚಂದ್ರಾಕಾರವಾಗಿ ಕಾಣಿಸಿದ್ದು, ಆತನ ಪಶ್ಚಿಮಕ್ಕೆ ಪ್ರಜ್ವಲಿಸುವ-ಪ್ರಕಾಶಮಾನವಾದ ಶುಕ್ರ ಕೆಳಗೆ ನೇತಾಡುತ್ತಿದ್ದಂತೆ ಕಂಡುಬಂದಿದೆ" ಎಂದು ತಿಳಿಸಿದೆ.
ಇದನ್ನೂ ಓದಿ:ಇಸ್ರೋ ಜಪಾನ್ ಏಜೆನ್ಸಿಯೊಂದಿಗೆ ಚಂದ್ರನ ಮೇಲೆ ಮಿಷನ್ ಉಡಾವಣೆ ಬಗ್ಗೆ ಚರ್ಚಿಸುತ್ತಿದೆ: ಎಸ್ ಸೋಮನಾಥ್
ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ ಔಟ್‌ರೀಚ್ ಆ್ಯಂಡ್ ಎಜುಕೇಶನ್ ಸಹ ಟ್ವೀಟ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, "ಇದನ್ನು ಶುಕ್ರ ಮತ್ತು ಚಂದ್ರನ ಸಂಯೋಗ ಎಂದು ಹೇಳಬಹುದು. ಆಕಾಶದಲ್ಲಿ ನಡೆದ ಘಟನೆ ನೋಡಿ ಆನಂದಿಸಿ" ಎಂದು ತಿಳಿಸಿ ಅಪರೂಪದ ಫೋಟೋ ಹಂಚಿಕೊಂಡಿದೆ.