ಕರ್ನಾಟಕ

karnataka

ETV Bharat / science-and-technology

ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗಾಗಿ ಮೊಬೈಲ್​ ಲೈಬ್ರರಿ.. ಚೆನ್ನೈನ ಅಣ್ಣಾ ವಿವಿ ವಿನೂತನ ಪ್ರಯತ್ನ - ಮೊಬೈಲ್​ ಲೈಬ್ರರಿ ಪ್ರಾರಂಭಿಸಿದ ಚೆನ್ನೈನ ಅಣ್ಣಾ ವಿವಿ

ಅಣ್ಣಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ವೆಬ್​ಸೈಟ್​ಗೆ ಭೇಟಿ ನೀಡಿ ಡಿಜಿಟಲ್​ ರೂಪದಲ್ಲಿರುವ ಪುಸ್ತಕಗಳನ್ನು ಓದಬಹುದು. ವಿದ್ಯಾರ್ಥಿಗಳು ಕೋರ್ಸ್​ ಮುಗಿಸಿದ ಮೇಲೆ ಈ ಸೌಲಭ್ಯ ಲಭ್ಯವಿರುವುದಿಲ್ಲ.

Mobile Library facility
ಮೊಬೈಲ್​ ಲೈಬ್ರರಿ ವ್ಯವಸ್ಥೆ

By

Published : Feb 9, 2023, 4:07 PM IST

ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಬಳಕೆಯನ್ನು ಹೆಚ್ಚು ಅನುಕೂಲಕರವಾಗಿಸಬೇಕು ಮತ್ತು ಸಂಶೋಧನಾ ಜರ್ನಲ್​ಗಳನ್ನು ಓದುವ ಮೂಲಕ ವಿದ್ಯಾರ್ಥಿಗಳ ಜ್ಞಾನ ಅಭಿವೃದ್ಧಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಮೊಬೈಲ್ ಲೈಬ್ರರಿ ಎಂಬ ಮೊಬೈಲ್​ ಅಪ್ಲಿಕೇಶನ್​ ಸೌಲಭ್ಯವನ್ನು ಅಣ್ಣಾ ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಲಾಗಿದೆ. ಈ ಮೊಬೈಲ್​ ಅಪ್ಲಿಕೇಶನ್​ ಅನ್ನು ವಿಶ್ವವಿದ್ಯಾಲಯದ ಉಪಕುಲಪತಿ ವೇಲ್​ರಾಜ್​ ಫೆ. 6 ರಂದು ಬಿಡುಗಡೆ ಮಾಡಿದ್ದಾರೆ.

ಅಣ್ಣಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು https://library.annauniv.edu/index.php ವೆಬ್‌ಸೈಟ್‌ಗೆ ಭೇಟಿ ನೀಡಿ ಪಠ್ಯಪುಸ್ತಕಗಳನ್ನು ಡಿಜಿಟಲ್​ ರೂಪದಲ್ಲಿ ಓದಬಹುದು. ಪಠ್ಯಪುಸ್ತಕಗಳು ಮಾತ್ರವಲ್ಲದೇ ಅಂತಾರಾಷ್ಟ್ರೀಯ ನಿಯತಕಾಲಿಕೆಗಳನ್ನು ಕೂಡ ವಿದ್ಯಾರ್ಥಿಗಳು ಈ ವೆಬ್​ಸೈಟ್​ ಮೂಲಕ ಡಿಜಿಟಲ್​ ಆಗಿ ಓದುವ ಅವಕಾಶ ಪಡೆದುಕೊಳ್ಳಲಿದ್ದಾರೆ.

ಅಣ್ಣಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಗ್ರಂಥಾಲಯ ವಿಭಾಗದ ನಿರ್ದೇಶಕ ಅರಿವುಡೈನಂಬಿ ಮಾತನಾಡಿ, 'ಅಣ್ಣಾ ವಿವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಗಣಕಯಂತ್ರದ ಮೂಲಕವೇ ಗ್ರಂಥಾಲಯದಲ್ಲಿರುವ ಸಂಶೋಧನಾ ಲೇಖನಗಳನ್ನು ವೀಕ್ಷಿಸಬಹುದು. ಪ್ರಸ್ತುತ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಮೊಬೈಲ್​ ಲೈಬ್ರರಿ ಆರಂಭಿಸಲಾಗಿದೆ.

ಡಿಜಿಟಲ್ ಪುಸ್ತಕಗಳು ಮತ್ತು ಸಂಶೋಧನಾ ಲೇಖನಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕವೂ ವೀಕ್ಷಿಸಬಹುದು. ಅಲ್ಲದೇ, ವಿದ್ಯಾರ್ಥಿಗಳು ಮನೆಯಲ್ಲಿ ಮಾತ್ರವಲ್ಲ, ಬಸ್ ಮತ್ತು ರೈಲಿನಲ್ಲಿ ಪ್ರಯಾಣಿಸುವಾಗಲೂ ಈ ಮೊಬೈಲ್​ ಅಪ್ಲಿಕೇಶನ್​ ಮೂಲಕ ಅಧ್ಯಯನ ಮಾಡಬಹುದು. ನೀವು ವಾಟ್ಸ್​ಆ್ಯಪ್​ ಅಥವಾ ಫೇಸ್​ಬುಕ್​ ಪರಿಶೀಲಿಸದೆಯೇ ಮನೆಯಿಂದಲೇ ಓದಬಹುದು. ಉಪಕುಲಪತಿ ವೇಲ್​ರಾಜ್ ಅವರ ಸೂಚನೆ ಮೇರೆಗೆ ಅಣ್ಣಾ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗ ಈ ಯೋಜನೆಯನ್ನು ಹೊಸ ಉಪಕ್ರಮವಾಗಿ ಪ್ರಾರಂಭಿಸಿದೆ.

20,000ಕ್ಕೂ ಅಧಿಕ ಮ್ಯಾಗಜಿನ್​ಗಳು ಇಲ್ಲಿ ಲಭ್ಯ: ಈ ಮೊಬೈಲ್​ ಲೈಬ್ರರಿ ಯೋಜನೆಯು ವಿದ್ಯಾರ್ಥಿಗಳು ಇನ್ನಷ್ಟು ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತೆ ಉತ್ತೇಜಿಸುತ್ತದೆ. ಮತ್ತು ಹೆಚ್ಚಿನ 'ನಾಕ್​' ಶ್ರೇಯಾಂಕ ಗಳಿಸಲು ಸಹಾಯ ಮಾಡುತ್ತದೆ. ಅಂತಾರಾಷ್ಟ್ರೀಯ ನಿಯತಕಾಲಿಕೆಗಳು ಒಳಗೊಂಡಂತೆ 20,000 ಕ್ಕೂ ಹೆಚ್ಚು ನಿಯತಕಾಲಿಕೆಗಳು ಸಂಶೋಧನಾ ನಿಯತಕಾಲಿಕೆಗಳ ವಿಭಾಗದಲ್ಲಿ ಲಭ್ಯವಿರಲಿದೆ. ಲಕ್ಷಾಂತರ ಮ್ಯಾಗಜಿನ್​ಗಳನ್ನು ಆನ್‌ಲೈನ್‌ನಲ್ಲಿ ಓದಬಹುದು. ನೀವು ಶಿಕ್ಷಕರು ಮತ್ತು ಪ್ರಾಧ್ಯಾಪಕರು ತಿಳಿಸಿದಂತಹ ಪುಸ್ತಕಗಳನ್ನು ಈ ಅಪ್ಲಿಕೇಶನ್​ ಮೂಲಕ ಡೌನ್‌ಲೋಡ್ ಮಾಡಬಹುದು ಮತ್ತು ಪ್ರಯಾಣ ಮಾಡುವಾಗಲೇ ಓದಬಹುದಾಗಿದೆ.

ಕೋರ್ಸ್​ ಮುಗಿಯುವವರೆಗಷ್ಟೇ ಸೌಲಭ್ಯ ಲಭ್ಯ: ಈ ಮೊಬೈಲ್​ ಅಪ್ಲಿಕೇಶನ್​ ಮೂಲಕ ವಿದ್ಯಾರ್ಥಿಗಳು ಕೋರ್ಸ್ ಮುಗಿಯುವವರೆಗೆ ಅಧ್ಯಯನ ಮಾಡಬಹುದು. ಅಧ್ಯಯನದ ಅವಧಿ ಮುಗಿದ ನಂತರ ಅವರಿಗೆ ಈ ಅಪ್ಲಿಕೇಶನ್​ನಲ್ಲಿ ಏನನ್ನೂ ನೋಡಲು ಸಾಧ್ಯವಾಗುವುದಿಲ್ಲ. ಸದ್ಯ ಅಣ್ಣಾ ವಿಶ್ವವಿದ್ಯಾಲಯದ 4 ಕಾಲೇಜುಗಳಲ್ಲಿ 10 ಸಾವಿರ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಉಪಕುಲಪತಿಗಳು ಈ ಸೌಲಭ್ಯವನ್ನು ಅಣ್ಣಾ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳಿಗೂ ಒದಗಿಸಲು ಪ್ರಯತ್ನಿಸುತ್ತಿದ್ದಾರೆ.

ಎಲ್ಲಿ ಬೇಕಾದರೂ ಬಳಸಬಹುದು: ಅಣ್ಣಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ರಾತ್ರಿ 10 ಗಂಟೆಯವರೆಗೆ ಹವಾನಿಯಂತ್ರಿತ ಕೊಠಡಿಯಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು. ಐಎಎಸ್, ಐಪಿಎಸ್ ನಂತಹ ಕೋರ್ಸ್‌ಗಳಿಗೆ ತಯಾರಿ ನಡೆಸಲು ಬೇಕಾದ ಪುಸ್ತಕಗಳು ಮತ್ತು ಇತರ ಎಲ್ಲಾ ಗ್ರಂಥಾಲಯ ಸೌಲಭ್ಯಗಳು ಸಹ ಇಲ್ಲಿ ಲಭ್ಯವಿದೆ. ಮೊಬೈಲ್ ಲೈಬ್ರರಿ ಅಪ್ಲಿಕೇಶನ್​ನಿಂದಾಗಿ ವಿದ್ಯಾರ್ಥಿಗಳು ಎಲ್ಲಿ ಬೇಕಾದರೂ ಅಧ್ಯಯನ ಮಾಡಲು ಅವಕಾಶ ಇರುವುದರಿಂದ ಸಮಯ ಉಳಿತಾಯವಾಗುತ್ತದೆ. ಪಿಡಿಎಫ್ ಫೈಲ್​ಗಳ ರೂಪದಲ್ಲಿ ದೊರೆಯುವುದರಿಂದ ವಿದ್ಯಾರ್ಥಿಗಳು ಅವುಗಳನ್ನು ನೋಟ್ಸ್ ಕೂಡ ಮಾಡಿಕೊಳ್ಳಬಹುದು' ಎಂದರು.

ಮೊಬೈಲ್​ ಲೈಬ್ರರಿ ಕುರಿತು ಮಾತನಾಡಿರುವ ಬಿಇ - ಇಇಇ ವಿದ್ಯಾರ್ಥಿನಿ ಪೊನ್. ಅಂಜರಿತಾ, 'ಅಣ್ಣಾ ವಿವಿಯಲ್ಲಿ ಆರಂಭಿಸಿರುವ ಮೊಬೈಲ್​ ಲೈಬ್ರರಿ ತುಂಬಾ ಉಪಯುಕ್ತವಾಗಿದೆ. ವಿಶ್ವವಿದ್ಯಾಲಯದ ಗ್ರಂಥಾಲಯದಿಂದ ಪುಸ್ತಕ ತೆಗೆದುಕೊಂಡರೂ 15 ದಿನ ಓದಬಹುದು. ಅದರ ನಂತರ, ಪುಸ್ತಕವನ್ನು ತೆಗೆದುಕೊಂಡು ಓದಲು ಸಾಧ್ಯವಾಗುವುದಿಲ್ಲ. ಮೊಬೈಲ್ ಲೈಬ್ರರಿಯಿಂದಾಗಿ ನಾವು ಇ-ಪುಸ್ತಕವನ್ನು ಎಷ್ಟು ದಿನ ಬೇಕಾದರೂ ಓದಬಹುದು. ಹೀಗಾಗಿ, ಒಂದು ನಿರ್ದಿಷ್ಟ ಪುಸ್ತಕವನ್ನು ಓದುವುದನ್ನು ಮುಂದುವರಿಸಬಹುದು.

ಸಂಶೋಧನೆಗೆ ಉತ್ತೇಜನ:ಅಲ್ಲದೆ, ನಾನು ಬಿಇಯಲ್ಲಿ ಇಇಇಯಲ್ಲಿ ನನ್ನ ಅಂತಿಮ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ಪ್ರಾಜೆಕ್ಟ್ ಮಾಡುವಾಗ ನಾವು ಹೆಚ್ಚಿನ ಪುಸ್ತಕಗಳು ಮತ್ತು ಸಂಶೋಧನಾ ನಿಯತಕಾಲಿಕಗಳನ್ನು ಸಂಪರ್ಕಿಸಬಹುದು. ಹೆಚ್ಚುತ್ತಿರುವ ಲೈಬ್ರರಿ ಸೌಲಭ್ಯಗಳೊಂದಿಗೆ, ವಿದ್ಯಾರ್ಥಿಗಳು ದೂರದಲ್ಲಿದ್ದರೂ ನಿರ್ದಿಷ್ಟ ಅಧ್ಯಯನ ಜರ್ನಲ್ ಅನ್ನು ಉಲ್ಲೇಖಿಸಲು ಕೇಳಬಹುದು. ಈ ಮೂಲಕ ಸಂಶೋಧನೆಯನ್ನು ಹೆಚ್ಚಿಸಬಹುದು' ಎಂದರು.

ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ 1978 ರಲ್ಲಿ ಗ್ರಂಥಾಲಯವನ್ನು ಪ್ರಾರಂಭಿಸಲಾಯಿತು. ನಂತರ, 2000ರಲ್ಲಿ, ವಿವಿಧ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುವಂತಹ ಪ್ರತ್ಯೇಕ ಗ್ರಂಥಾಲಯವನ್ನು ಸ್ಥಾಪಿಸಲಾಯಿತು. ಎಂಜಿನಿಯರಿಂಗ್ ವ್ಯಾಸಂಗಕ್ಕೆ ಬೇಕಾದ ಪುಸ್ತಕಗಳನ್ನು ಇಲ್ಲಿ ಇಡಲಾಗಿದೆ. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಪಡೆಯಲು ಕಂಪ್ಯೂಟರ್ ಮೂಲಕ ದಾಖಲೆಗಳನ್ನು ನಿರ್ವಹಿಸಲಾಗುತ್ತಿದೆ.

ಇದನ್ನೂ ಓದಿ:ಕೋಲ್ಕತ್ತಾ: 5,000 ಸಂತಾಲಿ ಭಾಷಾ ಪತ್ರಿಕೆಗಳ ಡಿಜಿಟಲೀಕರಣ ಮಾಡಿದ ಜಾದವ್‌ಪುರ ವಿವಿ

ABOUT THE AUTHOR

...view details