ಟೊರೊಂಟೊ( ಕೆನಡಾ): ಯಾವುದಾದರೂ ಸೋಂಕು ತಗುಲಿದಾಗ ಜ್ವರ ಬಾರದಂತೆ ತಕ್ಷಣ ಔಷಧ ತೆಗೆದುಕೊಳ್ಳುವ ಬದಲು ಸಣ್ಣದಾದ ಜ್ವರ ಬಂದು ಹೋಗಲು ಬಿಡುವುದು ಉತ್ತಮ ಎಂದು ಹೊಸ ಸಂಶೋಧನೆಯಲ್ಲಿ ತಿಳಿದು ಬಂದಿದೆ. ಆಲ್ಬರ್ಟಾ ವಿಶ್ವವಿದ್ಯಾನಿಲಯದ ಸಂಶೋಧಕರು, ಈ ಬಗ್ಗೆ ಮೀನುಗಳ ಮೇಲೆ ಸಂಶೋಧನೆ ನಡೆಸಿದ್ದು, ಮಧ್ಯಮ ಪ್ರಮಾಣದ ಜ್ವರವು ಅವುಗಳ ದೇಹದಿಂದ ಸೋಂಕನ್ನು ತ್ವರಿತವಾಗಿ ಶಮನಮಾಡಲು ಸಹಾಯ ಮಾಡಿರುವುದನ್ನು, ಉರಿಯೂತ ನಿಯಂತ್ರಿಸಿರುವುದನ್ನು ಮತ್ತು ಹಾನಿಗೊಳಗಾದ ಅಂಗಾಂಶವನ್ನು ಸರಿಪಡಿಸಿರುವುದನ್ನು ಕಂಡು ಹಿಡಿದಿದ್ದಾರೆ.
ನೈಸರ್ಗಿಕವಾಗಿ ಬರುವ ಜ್ವರವು ಸೋಂಕಿನ ವಿರುದ್ಧ ರಕ್ಷಣೆಯನ್ನು ಸಕ್ರಿಯಗೊಳಿಸುವುದಲ್ಲದೇ, ಅದನ್ನು ನಿಯಂತ್ರಿಸಲು ಸಹಾಯ ಮಾಡುವ ಸಮಗ್ರ ಪ್ರತಿಕ್ರಿಯೆಯನ್ನು ದೇಹದಲ್ಲಿ ಚಾಲನೆಗೊಳಿಸುತ್ತದೆ ಎಂದು ಸಂಶೋಧನೆಯು ತೋರಿಸಿದೆ ಎಂದು ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಇಮ್ಯುನೊಲೊಜಿಸ್ಟ್ ಡೇನಿಯಲ್ ಬ್ಯಾರೆಡಾ ಹೇಳಿದರು. ಈ ಸಂಶೋಧನಾ ವರದಿಯು eLife ಹೆಸರಿನ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಇದರ ಪ್ರಕಾರ ಜ್ವರವು ಸುಮಾರು ಏಳು ದಿನಗಳಲ್ಲಿ ಮೀನಿನ ಸೋಂಕನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ ಎಂದು ತಿಳಿಯಲಾಗಿದೆ. ಜ್ವರ ಬಾರದಂತೆ ಮಾಡಿದ ಮೀನಿಗೆ ಹೋಲಿಸಿದರೆ ಸೋಂಕು ಕಡಿಮೆಯಾಗುವ ಅವಧಿ ಸುಮಾರು ಅರ್ಧದಷ್ಟಿದೆ.
ಜ್ವರವು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಗಾಯಗೊಂಡ ಅಂಗಾಂಶಗಳನ್ನು ಸರಿಪಡಿಸಲು ಕೂಡ ಸಹಾಯ ಮಾಡಿದೆ. ಪ್ರಕೃತಿ ಮಾಡುವುದನ್ನು ನಾವು ಪ್ರಕೃತಿಗೆ ಬಿಡುತ್ತೇವೆ ಮತ್ತು ಈ ಸಂದರ್ಭದಲ್ಲಿ ಇದು ತುಂಬಾ ಸಕಾರಾತ್ಮಕ ವಿಷಯವಾಗಿದೆ ಎಂದು ಬ್ಯಾರೆಡಾ ಹೇಳಿದರು. ಮಧ್ಯಮ ಪ್ರಮಾಣದ ಜ್ವರವು ತಾನಾಗಿಯೇ ಸೋಂಕು ಗುಣಪಡಿಸುತ್ತದೆ. ಅಂದರೆ ದೇಹವು ಜ್ವರ ಬರುವಂತೆ ಮಾಡುತ್ತದೆ ಮತ್ತು ತಾನಾಗಿಯೇ ಅದನ್ನು ವಾಸಿ ಮಾಡುತ್ತದೆ ಎಂದು ಅವರು ವಿವರಿಸಿದರು.