ಸ್ಯಾನ್ ಫ್ರಾನ್ಸಿಸ್ಕೋ :ಮೈಕ್ರೋಸಾಫ್ಟ್ ತನ್ನ ಕೃತಕ ಬುದ್ಧಿಮತ್ತೆ ಚಾಲಿತ ಪರ್ಸನಲ್ ಅಸಿಸ್ಟೆಂಟ್ ಕೋಪೈಲಟ್ (Copilot) ಅನ್ನು ಶೀಘ್ರದಲ್ಲೇ ಒಂದು ಬಿಲಿಯನ್ ವಿಂಡೋಸ್ 10 ಬಳಕೆದಾರರಿಗೆ ನೀಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ವಿಂಡೋಸ್ 11 ನಂತೆಯೇ, ಈ ಅಪ್ಡೇಟ್ ವಿಂಡೋಸ್ 10 ಟಾಸ್ಕ್ಬಾರ್ನಲ್ಲಿ ನೇರವಾಗಿ ಕೋಪೈಲಟ್ ಬಟನ್ ಇರಲಿದೆ.
ವಿಂಡೋಸ್ 10 ಕೋಪೈಲಟ್ ಅಪ್ಡೇಟ್ ಎರಡೂ ಆಪರೇಟಿಂಗ್ ಸಿಸ್ಟಮ್ಗಳಲ್ಲಿ ಕಾರ್ಯನಿರ್ವಹಿಸುವ ಪ್ಲಗ್ಇನ್ಗಳನ್ನು ಸಹ ಒಳಗೊಂಡಿರುತ್ತದೆ. "ವಿಂಡೋಸ್ 10 ಮತ್ತು ವಿಂಡೋಸ್ 11 ನಾದ್ಯಂತ ಕೋಪೈಲೆಟ್ನ ಅನುಭವ ಮತ್ತು ಸಾಮರ್ಥ್ಯಗಳು ಸರಿಸುಮಾರು ಒಂದೇ ಆಗಿರುತ್ತವೆ. ಇದರಲ್ಲಿ ಓಎಸ್ನ ಎರಡೂ ಆವೃತ್ತಿಗಳಲ್ಲಿ ಪ್ಲಗಿನ್ ಹೊಂದಾಣಿಕೆಯೂ ಸೇರಿದೆ" ಎಂದು ವರದಿ ಹೇಳಿದೆ. ಪ್ರಾಥಮಿಕವಾಗಿ ಮಾರುಕಟ್ಟೆ ಪಾಲು ಹೆಚ್ಚಿಸುವ ಸಲುವಾಗಿಯೇ ಮೈಕ್ರೊಸಾಫ್ಟ್ ಎಲ್ಲರಿಗೂ ಕೋಪೈಲಟ್ ಲಭ್ಯವಾಗುವಂತೆ ಮಾಡುತ್ತಿದೆ.
ವಿಂಡೋಸ್ 11 ಅನ್ನು 400 ಮಿಲಿಯನ್ ಮಾಸಿಕ ಸಕ್ರಿಯ ಕಂಪ್ಯೂಟರುಗಳಲ್ಲಿ ಹಾಗೂ ವಿಂಡೋಸ್ 10 ಅನ್ನು ಸರಿಸುಮಾರು 1 ಬಿಲಿಯನ್ ಮಾಸಿಕ ಸಕ್ರಿಯ ಕಂಪ್ಯೂಟರುಗಳಲ್ಲಿ ಬಳಸಲಾಗುತ್ತಿದೆ. ಮೈಕ್ರೋಸಾಫ್ಟ್ ಹೆಚ್ಚುವರಿ 1 ಬಿಲಿಯನ್ ಬಳಕೆದಾರರನ್ನು ಕೋಪೈಲಟ್ ವಿಸ್ತರಣೆಗೆ ಬಳಸದ ಮಾರುಕಟ್ಟೆಯಾಗಿ ಪರಿಗಣಿಸಿದೆ. ಆದ್ದರಿಂದ ಕೋಪೈಲಟ್ ಅನ್ನು ವಿಂಡೋಸ್ 10 ಗೆ ಸಂಯೋಜಿಸುವುದು ಕಂಪನಿಯ ಮುಂದಿನ ಸಹಜ ಹಂತವಾಗಿದೆ ಎಂದು ವರದಿ ಹೇಳಿದೆ. ವಿಂಡೋಸ್ 11 ಗಾಗಿ ಎಐ ಅಸಿಸ್ಟೆಂಟ್ ಕೋಪೈಲಟ್ ಬೀಟಾ ವರ್ಷನ್ ಆಗಸ್ಟ್ನಲ್ಲಿ ಬಿಡುಗಡೆಯಾಗಿತ್ತು ಮತ್ತು ಅಧಿಕೃತವಾಗಿ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಿತ್ತು.