ಲಾಸ್ ಎಂಜೆಲೀಸ್: ಅಕ್ಟೋಬರ್ 2025 ರ ವೇಳೆಗೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ಗೆ ಮೈಕ್ರೋಸಾಫ್ಟ್ ತನ್ನ ಬೆಂಬಲವನ್ನು ಕೊನೆಗೊಳಿಸಲಿದೆ. ಆದರೆ, ಮೈಕ್ರೊಸಾಫ್ಟ್ ಕಾರ್ಪೊರೇಷನ್ನ ಈ ನಿರ್ಧಾರದಿಂದ ಗಮನಾರ್ಹ ಪ್ರಮಾಣದ ಎಲೆಕ್ಟ್ರಾನಿಕ್ ತ್ಯಾಜ್ಯ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಕ್ಯಾನಲಿಸ್ ರಿಸರ್ಚ್ ತಿಳಿಸಿದೆ. ವಿಂಡೋಸ್ 10 ಔಟ್ಡೇಟೆಡ್ ಆಗುವುದರಿಂದ ಸರಿಸುಮಾರು 240 ಮಿಲಿಯನ್ ಪರ್ಸನಲ್ ಕಂಪ್ಯೂಟರ್ ಗಳು ನಿರುಪಯುಕ್ತವಾಗಬಹುದು ಮತ್ತು ಈ ತ್ಯಾಜ್ಯವು ಭೂಮಿಯನ್ನು ಸೇರಬಹುದು. ಇನ್ನು ಈ 240 ಮಿಲಿಯನ್ ಪಿಸಿಗಳಿಂದ ಅಂದಾಜು ಸುಮಾರು 480 ಮಿಲಿಯನ್ ಕಿಲೋಗ್ರಾಂಗಳಷ್ಟು ಎಲೆಕ್ಟ್ರಾನಿಕ್ ತ್ಯಾಜ್ಯ ಸೃಷ್ಟಿಯಾಗಬಹುದು. ಈ ತ್ಯಾಜ್ಯ 3,20,000 ಕಾರುಗಳ ತೂಕಕ್ಕೆ ಸಮನಾಗಿರುತ್ತದೆ.
ಮೈಕ್ರೊಸಾಫ್ಟ್ ಸಪೋರ್ಟ್ ನಿಲ್ಲಿಸಿದ ನಂತರವೂ ಈ ಪಿಸಿಗಳು ಇನ್ನೂ ಕೆಲ ವರ್ಷಗಳವರೆಗೆ ಕಾರ್ಯಾಚರಣೆಯಲ್ಲಿರಬಹುದು ಎಂದು ನಿರೀಕ್ಷಿಸಲಾಗಿದೆ. ಆದರೂ ಸಾಫ್ಟ್ವೇರ್ ಅಪ್ಡೇಟ್ ಸಪೋರ್ಟ್ ಇಲ್ಲದ ಪಿಸಿಗಳನ್ನು ಬಳಸುವವರು ಕಡಿಮೆ. ಮೈಕ್ರೋಸಾಫ್ಟ್ ಅಕ್ಟೋಬರ್ 2028 ರವರೆಗೆ ವಿಂಡೋಸ್ 10 ಸಾಧನಗಳಿಗೆ ಸೆಕ್ಯೂರಿಟಿ ಅಪ್ಡೇಟ್ ನೀಡುವ ಯೋಜನೆಯನ್ನು ಹೊಂದಿದೆ. ಆದರೆ ಇದಕ್ಕಾಗಿ ಗ್ರಾಹಕರು ಹೆಚ್ಚುವರಿ ಹಣ ಪಾವತಿ ಮಾಡಬೇಕಾಗುತ್ತದೆ. ಈ ಮೊತ್ತ ಎಷ್ಟೆಂಬುದನ್ನು ಮೈಕ್ರೊಸಾಫ್ಟ್ ಇನ್ನೂ ಬಹಿರಂಗಪಡಿಸಿಲ್ಲ. ಪಾವತಿಸಿ ಸಪೋರ್ಟ್ ಪಡೆಯುವುದು ತೀರಾ ದುಬಾರಿ ಎನಿಸಿದರೆ ಅದರ ಬದಲು ಗ್ರಾಹಕರು ಹೊಸ ಪಿಸಿ ಕೊಳ್ಳಲು ಮುಂದಾಗಬಹುದು. ಇದರಿಂದ ಹಳೆಯ ಪಿಸಿಗಳು ತ್ಯಾಜ್ಯ ಸೇರಬಹುದು.