ಕರ್ನಾಟಕ

karnataka

ETV Bharat / science-and-technology

ಆ್ಯಪಲ್ ಹಿಂದಿಕ್ಕಿ ವಿಶ್ವದ ಅತಿದೊಡ್ಡ ಕಂಪನಿಯಾದ ಮೈಕ್ರೊಸಾಫ್ಟ್​ - ಆ್ಯಪಲ್

ಆ್ಯಪಲ್ ಕಂಪನಿಯನ್ನು ಹಿಂದಿಕ್ಕಿರುವ ಮೈಕ್ರೊಸಾಫ್ಟ್​ ವಿಶ್ವದ ಅತಿದೊಡ್ಡ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Microsoft overtakes Apple to become worlds most valuable company
Microsoft overtakes Apple to become worlds most valuable company

By ETV Bharat Karnataka Team

Published : Jan 12, 2024, 12:32 PM IST

ಲಂಡನ್: ಮೈಕ್ರೋಸಾಫ್ಟ್ ಮಾರುಕಟ್ಟೆ ಮೌಲ್ಯದ ಪ್ರಕಾರ ಆ್ಯಪಲ್ ಅನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಈ ಮೂಲಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬೆಳವಣಿಗೆಯು ಎರಡು ಬಿಗ್ ಟೆಕ್ ಕಂಪನಿಗಳ ನಡುವಿನ ದಶಕಗಳ ಪೈಪೋಟಿಗೆ ಹೊಸ ತಿರುವು ನೀಡಿದಂತಾಗಿದೆ.

ಮೈಕ್ರೊಸಾಫ್ಟ್ ಕಂಪನಿಯ ಷೇರುಗಳು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಶೇಕಡಾ 1ರಷ್ಟು ಏರಿಕೆಯಾಗಿ ಅದರ ಮಾರುಕಟ್ಟೆ ಮೌಲ್ಯವನ್ನು 2.87 ಟ್ರಿಲಿಯನ್ ಡಾಲರ್​ಗೆ ಕೊಂಡೊಯ್ದವು. ಇದು ಆ್ಯಪಲ್‌ನ ಮಾರುಕಟ್ಟೆ ಮೌಲ್ಯಕ್ಕಿಂತ ತುಸುವೇ ಜಾಸ್ತಿಯಾಗಿದೆ. ಗುರುವಾರ ಆ್ಯಪಲ್‌ನ ಷೇರುಗಳು ಸುಮಾರು 1 ಪ್ರತಿಶತದಷ್ಟು ಕುಸಿದವು. ನ್ಯೂಯಾರ್ಕ್​ನಲ್ಲಿ ಬೆಳಗ್ಗೆ ವಹಿವಾಟು ಮುಂದುವರೆದಂತೆ ಮೈಕ್ರೊಸಾಫ್ಟ್​ ಹಾಗೂ ಆ್ಯಪಲ್​ ಆಗಾಗ ನಂಬರ್ ಒನ್ ಸ್ಥಾನಕ್ಕೇರಿ ಕೆಳಗಿಳಿದವು.

ಎಐನ ಹೊಸ ತಲೆಮಾರಿನ ತಂತ್ರಜ್ಞಾನದ ಅಭಿವೃದ್ಧಿಯ ನಿರೀಕ್ಷೆಯಿಂದ ಹೂಡಿಕೆದಾರರು ಉತ್ಸಾಹ ತೋರಿದ್ದರಿಂದ ಮೈಕ್ರೊಸಾಫ್ಟ್​ ಷೇರು ಬೆಲೆಗಳು ಏರಿಕೆಯಾಗಿವೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ವಿಶ್ವದ ಅತ್ಯಂತ ಜನಪ್ರಿಯ ಎಐ ಚಾಟ್​ಬಾಟ್​ ಚಾಟ್​ ಜಿಪಿಟಿಯ ತಯಾರಕ ಕಂಪನಿ ಓಪನ್​ ಎಐ ಅನ್ನು ಮೈಕ್ರೊಸಾಫ್ಟ್​ ಬೆಂಬಲಿಸುತ್ತಿದೆ. ಪ್ರಮುಖವಾಗಿ ಚೀನಾ ಸೇರಿದಂತೆ ವಿಶ್ವದ ಕೆಲ ದೇಶಗಳಲ್ಲಿ ಐಫೋನ್​ ಮಾರಾಟ ಕುಸಿತವು ಆ್ಯಪಲ್ ಷೇರುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಆ್ಯಪಲ್ ಮತ್ತು ಮೈಕ್ರೋಸಾಫ್ಟ್ 1980 ರ ದಶಕದಿಂದಲೂ ಪ್ರತಿಸ್ಪರ್ಧಿಗಳಾಗಿವೆ. ಆಗ ಬಿಲ್ ಗೇಟ್ಸ್​ ಸ್ಥಾಪಿಸಿದ ಮೈಕ್ರೊಸಾಫ್ಟ್​ ಕಂಪನಿಯು ತನ್ನ ಮ್ಯಾಕಿಂತೋಷ್ ಕಂಪ್ಯೂಟರ್​ ಸಾಫ್ಟ್​ವೇರ್​ನ ವಿನ್ಯಾಸ ಮತ್ತು ರಚನೆಯನ್ನು ಕದ್ದಿದೆ ಎಂದು ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ ವೋಜ್ನಿಯಾಕ್‌ರಿಂದ ಸ್ಥಾಪಿತವಾದ ಆ್ಯಪಲ್ ಆರೋಪಿಸಿತ್ತು.

ಆ್ಯಪಲ್ 1990ರ ದಶಕದ ಆರಂಭದಲ್ಲಿ ವಿಂಡೋಸ್ ವಿರುದ್ಧ ಆ್ಯಪಲ್ ಕೃತಿಸ್ವಾಮ್ಯ ಮೊಕದ್ದಮೆ ದಾಖಲಿಸಿತ್ತು. ಆದರೆ ಈ ಮೊಕದ್ದಮೆಯನ್ನು ಆ್ಯಪಲ್ ಸೋತ ನಂತರ ಮೈಕ್ರೊಸಾಫ್ಟ್​ ದಶಕಗಳ ಕಾಲ ಪಿಸಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದೆ. ಮೈಕ್ರೋಸಾಫ್ಟ್ ವಿಶ್ವದ ಅತಿದೊಡ್ಡ ಕಂಪ್ಯೂಟರ್ ಸಾಫ್ಟ್ ವೇರ್ ಮಾರಾಟಗಾರ ಕಂಪನಿಯಾಗಿದೆ. ಇದು ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳು, ವಿಡಿಯೋ ಗೇಮ್‌ಗಳು, ಕಂಪ್ಯೂಟರ್ ಮತ್ತು ಗೇಮಿಂಗ್ ಹಾರ್ಡ್‌ವೇರ್, ಸರ್ಚ್​ ಮತ್ತು ಇತರ ಆನ್‌ಲೈನ್ ಸೇವೆಗಳ ಪ್ರಮುಖ ಪೂರೈಕೆದಾರನಾಗಿದೆ.

ಇದನ್ನೂ ಓದಿ:ಎಐ ಚಾಲಿತ ಸುಳ್ಳು ಮಾಹಿತಿ ವಿಶ್ವಕ್ಕೆ ಅತಿದೊಡ್ಡ ಅಪಾಯ: ವಿಶ್ವ ಆರ್ಥಿಕ ವೇದಿಕೆ ವರದಿ

ABOUT THE AUTHOR

...view details