ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೊಸಾಫ್ಟ್ ಆಪರೇಟಿಂಗ್ ಸಿಸ್ಟಂನಲ್ಲಿನ ಬಹುತೇಕ ಇನ್-ಬಾಕ್ಸ್ ಅಪ್ಲಿಕೇಶನ್ಗಳನ್ನು ಅನ್ ಇನ್ಸ್ಟಾಲ್ ಮಾಡುವ ಹಾಗೂ ಬಳಕೆದಾರರು ತಮಗೆ ಬೇಕಾದ ಸಾಫ್ಟ್ವೇರ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವ ಆಯ್ಕೆಯನ್ನು ಈಗ ಮೈಕ್ರೊಸಾಫ್ಟ್ ನೀಡಿದೆ. ಯುರೋಪಿಯನ್ ಎಕನಾಮಿಕ್ ಏರಿಯಾ (ಇಇಎ) ಪ್ರದೇಶದಲ್ಲಿ ಡಿಜಿಟಲ್ ಮಾರ್ಕೆಟ್ಸ್ ಆಕ್ಟ್ (ಡಿಎಂಎ) ನ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಮೈಕ್ರೊಸಾಫ್ಟ್ ತನ್ನ ಆಪರೇಟಿಂಗ್ ಸಿಸ್ಟಮ್ (ಒಎಸ್) ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ.
ಮೈಕ್ರೊಸಾಫ್ಟ್ ಎಡ್ಜ್ ವೆಬ್ ಬ್ರೌಸರ್ ಅನ್ನು ಅನ್ ಇನ್ಸ್ಟಾಲ್ ಮಾಡುವ ಮತ್ತು ವಿಂಡೋಸ್ ಸರ್ಚ್ ಪೇನ್ನಲ್ಲಿ Bing ಸರ್ಚ್ ಅನ್ನು ತೆಗೆದುಹಾಕುವ ಆಯ್ಕೆಗಳು ಇದಲ್ಲಿ ಸೇರಿವೆ ಎಂದು ವಿಂಡೋಸ್ ಸೆಂಟ್ರಲ್ ವರದಿ ಮಾಡಿದೆ. ಅಂದರೆ ಬಳಕೆದಾರರು ತಮಗೆ ಬೇಡವಾದ ಅಪ್ಲಿಕೇಶನ್ಗಳನ್ನು ತೆಗೆದುಹಾಕುವ ಅಪ್ಲಿಕೇಶನ್ಗಳ ಪಟ್ಟಿ ಈಗ ವಿಸ್ತಾರವಾಗಿದೆ. ಸದ್ಯ ಫೈಲ್ ಎಕ್ಸ್ ಪ್ಲೋರರ್ ಮತ್ತು ಫೋನ್ ಲಿಂಕ್ ಈ ಎರಡು ಇನ್-ಬಾಕ್ಸ್ ಅಪ್ಲಿಕೇಶನ್ಗಳನ್ನು ಮಾತ್ರ ಅನ್ ಇನ್ಸ್ಟಾಲ್ ಮಾಡಲು ಸಾಧ್ಯವಿಲ್ಲ.
ಇದಲ್ಲದೆ, ಮೈಕ್ರೊಸಾಫ್ಟ್ ವಿಜೆಟ್ ಬೋರ್ಡ್ಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಬಿಡುಗಡೆ ಮಾಡುತ್ತಿದ್ದು, ಇದರ ಮೂಲಕ ಬಳಕೆದಾರರು ಮೈಕ್ರೊಸಾಫ್ಟ್ ಸುದ್ದಿ ಮತ್ತು ಜಾಹೀರಾತು ಫೀಡ್ ಅನ್ನು ನಿಷ್ಕ್ರಿಯಗೊಳಿಸಬಹುದಾಗಿದೆ. ಆದಾಗ್ಯೂ ಬೇಕಾದವರು ಅವುಗಳ ಬಳಕೆ ಮುಂದುವರಿಸಬಹುದು. ಈ ಬದಲಾವಣೆಗಳು ಇಇಎಯಲ್ಲಿನ ವಿಂಡೋಸ್ 11 ಪಿಸಿಗಳಿಗೆ ನಿರ್ದಿಷ್ಟವಾಗಿರುತ್ತವೆ ಎಂದು ಕಂಪನಿ ಹೇಳಿದೆ. ಹೀಗಾಗಿ ಈ ಪ್ರದೇಶದ ಹೊರಗಿನ ಬಳಕೆದಾರರಿಗೆ ಈ ಬದಲಾವಣೆಗಳು ಅನ್ವಯವಾಗುತ್ತವೆಯಾ ಎಂಬುದು ಅಸ್ಪಷ್ಟವಾಗಿದೆ ಎಂದು ವರದಿ ತಿಳಿಸಿದೆ.