ಅಮರಾವತಿ(ಮಹಾರಾಷ್ಟ್ರ):ಶನಿವಾರ ರಾತ್ರಿ ಆಗಸದಲ್ಲಿ ವಿಸ್ಮಯ ಜರುಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ನಾಗಪುರ, ಅಮರಾವತಿ ಸೇರಿದಂತೆ ಕೆಲವೇ ಕೆಲವು ಪ್ರದೇಶಗಳಲ್ಲಿ ಉಲ್ಕಾಪಾತವಾಗಿದ್ದು, ಅರ್ಹಾದ್ ಗ್ರಾಮದ ರೈತ ಪ್ರಕಾಶ್ ಎಂಬಾತ ಮೊಬೈಲ್ ಕೆಮರಾದಲ್ಲಿ ಈ ದೃಶ್ಯ ಸೆರೆಹಿಡಿದಿದ್ದಾರೆ. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಉಲ್ಕಾಪಾತಕ್ಕಿಂತ ಭಿನ್ನವಾಗಿ ಮತ್ತು ವಿಚಿತ್ರವಾಗಿ ಈ ಉಲ್ಕಾಪಾತ ಕಾಣಿಸಿಕೊಂಡಿರುವುದು ಜನರಲ್ಲಿ ಮತ್ತು ತಜ್ಞರಲ್ಲಿ ಅಚ್ಚರಿ ಉಂಟುಮಾಡಿದೆ.
ರಾತ್ರಿ ಸುಮಾರು 8 ಗಂಟೆಗೆ ಮೂರ್ನಾಲ್ಕು ಮಿಂಚಿನ ಸರಳುಗಳ ರೀತಿಯಲ್ಲಿ ಭಾಸವಾಗುವಂತೆ ಉಲ್ಕೆಗಳು ಕಾಣಿಸಿಕೊಂಡಿವೆ. ಇದು ಉಲ್ಕಾಪಾತವೆಂದು ಶ್ರೀ ಶಿವಾಜಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ಪಂಕಜ್ ನಾಗ್ಪುರೆ ಮತ್ತು ನಿವೃತ್ತ ಪ್ರಾಧ್ಯಾಪಕ ಡಾ.ಅನಿಲ್ ಅಸೋಲೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಅಮರಾವತಿ ನಗರದ ಹಲವೆಡೆ ಈ ಉಲ್ಕೆಗಳು ಕಾಣಿಸಿಕೊಂಡಿವೆ. ನೆಲದ ಕಡೆಗೆ ಬಂದು ಉಲ್ಕೆಗಳು ಮಾಯವಾಗಿವೆ ಎಂದು ಅನಿಲ್ ಅಸೋಲೆ ವಿವರಿಸಿದ್ದಾರೆ. ನಾಗ್ಪುರದಲ್ಲಿಯೂ ಕೆಲವರು ಇಂತಹ ಸನ್ನಿವೇಶವನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ವಿದರ್ಭ ಪ್ರದೇಶದಲ್ಲಿಯೂ ಇಂಥಹ ವಿಡಿಯೋಗಳು ವೈರಲ್ ಆಗುತ್ತಿವೆ ಎಂದು ತಿಳಿದುಬಂದಿದ್ದು ಸರ್ಕಾರ ಈ ಬಗ್ಗೆ ಏನನ್ನೂ ಹೇಳಿಲ್ಲ.