ಬೆಂಗಳೂರು :ಟ್ವಿಟರ್ನ ಪ್ರತಿಸ್ಪರ್ಧಿ, ಮೆಟಾ ಒಡೆತನದ ಥ್ರೆಡ್ಸ್ ಲಾಂಚ್ ಆದ ಕೆಲವೇ ಗಂಟೆಗಳಲ್ಲಿ 10 ಮಿಲಿಯನ್ಗೂ ಹೆಚ್ಚು ಸೈನ್ ಅಪ್ಗಳನ್ನು ಪಡೆದುಕೊಂಡಿದೆ ಎಂದು ಮೆಟಾ ಸಿಇಓ ಮಾರ್ಕ್ ಜಕರ್‌ಬರ್ಗ್ ಹೇಳಿದ್ದಾರೆ. ಸದ್ಯ ಟ್ವಿಟರ್ ತಾನು ಆರಂಭವಾದಾಗಿನಿಂದ ಅತಿ ಹೆಚ್ಚು ಪೈಪೋಟಿ ಎದುರಿಸುತ್ತಿದೆ. ಈ ಹಿಂದೆ ಅನೇಕ ಆ್ಯಪ್ಗಳು ಟ್ವಿಟರ್ಗೆ ಪೈಪೋಟಿ ನೀಡಿದ್ದವಾದರೂ, ಅವು ಯಾವುವೂ ದೀರ್ಘಾವಧಿಯಲ್ಲಿ ಪ್ರಸಿದ್ಧಿ ಪಡೆಯಲಿಲ್ಲ. ಆದರೆ, ಈಗ ಮೆಟಾ ಕಂಪನಿಯ ಥ್ರೆಡ್ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಬಳಕೆದಾರರಿಂದ ಸೈನಪ್ ಪಡೆದುಕೊಂಡಿರುವುದು ಗಮನಾರ್ಹವಾಗಿದೆ.
ಥ್ರೆಡ್ ಆ್ಯಪ್ ಬುಧವಾರ 100 ದೇಶಗಳಲ್ಲಿ ಆ್ಯಪಲ್ ಮತ್ತು ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಲೈವ್ ಆಗಿದೆ ಮತ್ತು ಸದ್ಯಕ್ಕೆ ಯಾವುದೇ ಜಾಹೀರಾತುಗಳಿಲ್ಲದೇ ರನ್ ಆಗುತ್ತಿದೆ. "ಏಳು ಗಂಟೆಗಳಲ್ಲಿ 10 ಮಿಲಿಯನ್ ಸೈನ್ ಅಪ್" ಎಂದು ಜಕರ್‌ಬರ್ಗ್ ತನ್ನ ಅಧಿಕೃತ ಥ್ರೆಡ್ ಖಾತೆಯಲ್ಲಿ ಗುರುವಾರ ಬರೆದಿದ್ದಾರೆ.
ಥ್ರೆಡ್ಸ್ ಎಂಬುದು ಇನ್‌ಸ್ಟಾಗ್ರಾಮ್ ನ ಸ್ಪಿನ್ ಆಫ್ ಅಪ್ಲಿಕೇಶನ್ ಆಗಿದ್ದು ಅದು ಚಿತ್ರ ಮಾಧ್ಯಮಕ್ಕಿಂತ ಹೆಚ್ಚಾಗಿ ಸಂಭಾಷಣೆಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯೊಂದಿಗೆ ನೀವು ಲಾಗ್ ಇನ್ ಮಾಡಬಹುದು ಮತ್ತು ಟೆಕ್ಸ್ಟ್ ಅಪ್ಡೇಟ್ಗಳನ್ನು ಹಂಚಿಕೊಳ್ಳಬಹುದು ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ಸೇರಬಹುದು.
ಅಪ್ಲಿಕೇಶನ್ ತನ್ನ ವಿನ್ಯಾಸದಲ್ಲಿ ಇನ್‌ಸ್ಟಾಗ್ರಾಮ್ ಕಾಮೆಂಟ್ ವಿಭಾಗವನ್ನು ಹೋಲುತ್ತದೆ. ಆದರೆ ಪೋಸ್ಟ್‌ಗಳಿಗೆ ಪ್ರತ್ಯುತ್ತರ ಮತ್ತು ಮರು-ಹಂಚಿಕೆಯಂತಹ ಟ್ವಿಟರ್ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ. ನೀವು ಲಿಂಕ್‌ಗಳು, 10 ಫೋಟೋಗಳವರೆಗೆ ಮತ್ತು 5 ನಿಮಿಷಗಳವರೆಗೆ ವಿಡಿಯೋಗಳನ್ನು ಹೊಂದಿದ 500 ಅಕ್ಷರಗಳವರೆಗಿನ ಪೋಸ್ಟ್‌ಗಳನ್ನು (ಟ್ವಿಟ್ಟರ್‌ನಲ್ಲಿ 280 ಕ್ಕಿಂತ ಹೆಚ್ಚು) ರಚಿಸಬಹುದು.
ನೀವು ಥ್ರೆಡ್‌ಗಳನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. ಟ್ವಿಟರ್ ರೀತಿಯಲ್ಲಿ ಇದರಲ್ಲಿ ಹ್ಯಾಷ್ಟ್ಯಾಗ್ಗಳನ್ನು ಬಳಸುವುದಿಲ್ಲ ಮತ್ತು ಟ್ರೆಂಡಿಂಗ್ ವಿಭಾಗವನ್ನು ಹೊಂದಿಲ್ಲ. ಥ್ರೆಡ್ಸ್ನ ಆರಂಭಿಕ ಯಶಸ್ಸಿಗೆ ಇನ್‌ಸ್ಟಾಗ್ರಾಮ್ ಮೂಲಕ ಸೈನ್ ಅಪ್ ಪ್ರಕ್ರಿಯೆಯು ದೊಡ್ಡ ಕಾರಣವಾಗಿದೆ ಎನ್ನಲಾಗಿದೆ. ಥ್ರೆಡ್ಸ್ ಇತರ ಟ್ವಿಟರ್ ಪ್ರತಿಸ್ಪರ್ಧಿಗಳಂತೆ ಹೊಸದಾಗಿ ಬಳಕೆದಾರರನ್ನು ಹೊಂದುವ ಬದಲು, ಈಗಾಗಲೇ ಅಸ್ತಿತ್ವದಲ್ಲಿರುವ 2.35 ಶತಕೋಟಿ ಸಂಖ್ಯೆಯ ಬಳಕೆದಾರರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ನೀವು ಇನ್‌ಸ್ಟಾಗ್ರಾಮ್ ಖಾತೆಯೊಂದಿಗೆ ಸುಲಭವಾಗಿ ಸೈನ್ ಅಪ್ ಮಾಡಬಹುದು. ಬಯೋವನ್ನು ಸಹ ಸ್ವಯಂಚಾಲಿತವಾಗಿ ವರ್ಗಾಯಿಸಬಹುದು.
ಇದರಲ್ಲಿ ನೋಂದಣಿ ಪ್ರಕ್ರಿಯೆಯು ಕೂಡ ಸುಲಭವಾಗಿದೆ. ಭಾರತದಲ್ಲಿ ಆಪಲ್‌ನ ಆಪ್ ಸ್ಟೋರ್ ಮತ್ತು ಗೂಗಲ್‌ನ ಪ್ಲೇ ಸ್ಟೋರ್ ಎರಡರಲ್ಲೂ ಥ್ರೆಡ್ಸ್ ಲಭ್ಯವಾಗುತ್ತಿದೆ. ಜಸ್ಟ್ ಅದನ್ನು ಡೌನ್‌ಲೋಡ್ ಮಾಡಿ ಮತ್ತು ಬಳಸಲು ಆರಂಭಿಸಿ. 'Log in with Instagram’' ಟ್ಯಾಪ್ ಮಾಡಿ ಮತ್ತು 'Import from Instagram' ಬಟನ್ ಅನ್ನು ಒತ್ತಿ. ನೀವು ಥ್ರೆಡ್ಸ್ಗೆ ಸೇರಿದಾಗ ನಿಮ್ಮ ಶ್ರೇಣಿಯ ಆಧಾರದ ಮೇಲೆ ನೀವು ಐಡಿಯನ್ನು ಪಡೆಯುತ್ತೀರಿ.
ಇದನ್ನೂ ಓದಿ : ಸ್ಯಾಮ್ಸಂಗ್ M34 5G ಭಾರತದಲ್ಲಿ ಲಾಂಚ್: ಬೆಲೆ ರೂ.16,999 ರಿಂದ ಆರಂಭ