ನವದೆಹಲಿ: ಮೆಟಾ ಒಡೆತನದ ಮೈಕ್ರೊಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಥ್ರೆಡ್ಸ್ 150 ಮಿಲಿಯನ್ ಸೈನ್-ಅಪ್ ದಾಟಿದೆ. ಆದರೆ ದೈನಂದಿನ ಬಳಕೆದಾರರ ಸಂಖ್ಯೆಯಲ್ಲಿ ಥ್ರೆಡ್ಸ್ ತೀರಾ ಹಿಂದೆ ಬಿದ್ದಿದೆ. ಆರಂಭದಲ್ಲಿ ಥ್ರೆಡ್ಸ್ ಪ್ಲಾಟ್ಫಾರ್ಮ್ನಲ್ಲಿ ಬಳಕೆದಾರನೋರ್ವ ಸರಾಸರಿ 20 ನಿಮಿಷ ಸಮಯ ವ್ಯಯಿಸುತ್ತಿದ್ದ. ಆದರೆ ಈ ಅವಧಿ ಇದೀಗ ಶೇಕಡಾ 50 ರಷ್ಟು ಕುಸಿತವಾಗಿ ಕೇವಲ 10 ನಿಮಿಷ ಮಾತ್ರ ಉಳಿದಿದೆ. ಸೆನ್ಸರ್ ಟವರ್ ಡೇಟಾ ಪ್ರಕಾರ, ಜುಲೈ 5 ರಂದು ಥ್ರೆಡ್ಸ್ ಪ್ಲಾಟ್‌ಫಾರ್ಮ್ ಪ್ರಾರಂಭವಾದಾಗಿನಿಂದ ಅದರ ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆ ಸುಮಾರು ಶೇಕಡಾ 20 ರಷ್ಟು ಕಡಿಮೆಯಾಗಿದೆ.
ಸಿಮಿಲರ್ ವೆಬ್ ಡೇಟಾ ಪ್ರಕಾರ ಜಾಗತಿಕವಾಗಿ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಥ್ರೆಡ್ಸ್ನ ದೈನಂದಿನ ಸಕ್ರಿಯ ಬಳಕೆದಾರರ ಪ್ರಮಾಣ ಶೇಕಡಾ 25 ಕ್ಕಿಂತ ಹೆಚ್ಚು ಕುಸಿತವಾಗಿದೆ. ಬಳಕೆಯ ಸಮಯವು ಶೇಕಡಾ 50ಕ್ಕಿಂತ ಹೆಚ್ಚು ಕಡಿಮೆಯಾಗಿದೆ ಎಂದು ಅದು ಹೇಳಿದೆ. ಆದಾಗ್ಯೂ, ಇವು ಆರಂಭಿಕ ದಿನಗಳಾಗಿದ್ದು, ಮೆಟಾ ಟ್ವಿಟರ್ ತರಹದ ವೈಶಿಷ್ಟ್ಯಗಳನ್ನು ಪರಿಚಯಿಸಿದಂತೆ, ದೈನಂದಿನ ಬಳಕೆಯು ಹೆಚ್ಚಾಗಬಹುದು ಮತ್ತು ಥ್ರೆಡ್ಸ್ ಮತ್ತೆ ಮುನ್ನಡೆ ಸಾಧಿಸಬಹುದು ಎನ್ನಲಾಗಿದೆ.
"ಇವು ಆರಂಭಿಕ ದಿನಗಳಾಗಿದ್ದರೂ, ಥ್ರೆಡ್ಸ್ನ ಆರಂಭಿಕ ಯಶಸ್ಸಿನ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಇದು ನಮ್ಮ ನಿರೀಕ್ಷೆಗಳನ್ನು ಮೀರಿದೆ. ನಾವು ಕೇವಲ ಒಂದು ವಾರದ ಹಿಂದೆ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ್ದೇವೆ ಮತ್ತು ಸ್ಥಿರ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳುವುದು, ಹೊಸ ವೈಶಿಷ್ಟ್ಯಗಳನ್ನು ತಲುಪಿಸುವುದು ಮತ್ತು ಮುಂಬರುವ ತಿಂಗಳುಗಳಲ್ಲಿ ಅನುಭವವನ್ನು ಸುಧಾರಿಸುವುದನ್ನು ಮುಂದುವರಿಸುವುದರತ್ತ ನಾವು ನಮ್ಮ ಗಮನ ಕೇಂದ್ರೀಕರಿಸಿದ್ದೇವೆ” ಎಂದು ಕಂಪನಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.