ಲಂಡನ್: ಐರೋಪ್ಯ ಒಕ್ಕೂಟದಲ್ಲಿ (ಇಯು) ಡೇಟಾ ವರ್ಗಾವಣೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐರಿಶ್ ಡೇಟಾ ಪ್ರೊಟೆಕ್ಷನ್ ಕಮಿಷನ್ ಸೋಮವಾರ ಮೆಟಾ (ಹಿಂದೆ ಫೇಸ್‌ಬುಕ್) ಗೆ ದಾಖಲೆಯ 1.3 ಶತಕೋಟಿ ಡಾಲರ್ ದಂಡ ವಿಧಿಸಿದೆ. ಮೇ 25, 2018 ರಂದು ಜಾರಿಗೆ ಬಂದ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಷನ್ (GDPR) ಅನ್ನು ಮೆಟಾ ಉಲ್ಲಂಘಿಸಿದೆ ಎಂದು ಡೇಟಾ ಪ್ರೊಟೆಕ್ಷನ್ ಕಮಿಷನ್ ಹೇಳಿದೆ. ತೀರ್ಪು ಫೇಸ್‌ಬುಕ್‌ಗೆ ಮಾತ್ರ ಅನ್ವಯಿಸುತ್ತಿದ್ದು, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್ಆ್ಯಪ್ಗೆ ಅನ್ವಯಿಸಲ್ಲ. ಡೇಟಾ ಪ್ರೊಟೆಕ್ಷನ್ ಕಮಿಷನ್ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮೆಟಾ ಹೇಳಿದೆ.
ಗಡಿಗಳಾಚೆ ಮಾಹಿತಿ ಸಾಗಿಸಲು ಸಾಧ್ಯವಾಗದೇ, ರಾಷ್ಟ್ರೀಯ ಹಾಗೂ ಸ್ಥಳೀಯ ಮಟ್ಟದಲ್ಲಿ ಇಂಟರ್ನೆಟ್ ಅಪಾಯಗಳನ್ನು ಸೃಷ್ಟಿಸಲಾಗುತ್ತಿದೆ. ಇದರಿಂದ ಜಾಗತಿಕ ಆರ್ಥಿಕತೆಗೆ ಅಡ್ಡಿಯಾಗುತ್ತಿದೆ ಮತ್ತು ವಿಶ್ವದ ಅನೇಕ ರಾಷ್ಟ್ರಗಳ ನಾಗರಿಕರು ಹಂಚಿಕೊಳ್ಳುವ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಮೆಟಾದ ಜಾಗತಿಕ ವ್ಯವಹಾರಗಳ ಅಧ್ಯಕ್ಷ ನಿಕ್ ಕ್ಲೆಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದತ್ತಾಂಶವನ್ನು ಅಮೆರಿಕಕ್ಕೆ ವರ್ಗಾಯಿಸಲು ಪ್ರಮಾಣಿತ ಒಪ್ಪಂದದ ಷರತ್ತುಗಳು (SCCs) ಎಂದು ಕರೆಯಲ್ಪಡುವ ಕಾನೂನು ವಿಧಾನಗಳನ್ನು ಮೆಟಾ ಬಳಸುವುದರಿಂದ ಯುರೋಪಿಯನ್ ಬಳಕೆದಾರರ ಮೂಲ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಅಪಾಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ಡೇಟಾ ಪ್ರೊಟೆಕ್ಷನ್ ರೆಗ್ಯುಲೇಷನ್ ಹೇಳಿದೆ.
ಅಟ್ಲಾಂಟಿಕ್‌ನಾದ್ಯಂತ ರವಾನಿಸಲಾದ ಡೇಟಾವನ್ನು ಅಮೆರಿಕದ ಗೂಢಚಾರಿಕೆ ಸಂಸ್ಥೆಗಳಿಂದ ಅಗತ್ಯ ಪ್ರಮಾಣದಲ್ಲಿ ರಕ್ಷಿಸಲಾಗಿಲ್ಲ ಎಂಬ ಯುರೋಪಿಯನ್ ಯೂನಿಯನ್ನ ಅತ್ಯುನ್ನತ ನ್ಯಾಯಾಲಯದ 2020 ರ ನಿರ್ಧಾರವನ್ನು ಅನುಸರಿಸಲು ಮೆಟಾ ವಿಫಲವಾಗಿದೆ ಎಂದು ನಿಯಂತ್ರಕ ಸಂಸ್ಥೆ ಹೇಳಿದೆ. 2020 ರಲ್ಲಿ ಯುರೋಪಿಯನ್ ಕೋರ್ಟ್ ಆಫ್ ಜಸ್ಟಿಸ್ ಪ್ರೈವಸಿ ಶೀಲ್ಡ್ ಎಂದು ಕರೆಯಲ್ಪಡುವ EU-US ಡೇಟಾ ಹರಿವಿನ ಒಪ್ಪಂದವನ್ನು ರದ್ದುಗೊಳಿಸಿತ್ತು. EU ಮತ್ತು US ಈಗ ಈ ವರ್ಷದ ನಂತರ ಬರಬಹುದಾದ ಹೊಸ ಡೇಟಾ ಹರಿವಿನ ಒಪ್ಪಂದದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಮೆಜಾನ್‌ಗೆ ಈ ಹಿಂದೆ ಲಕ್ಸೆಂಬರ್ಗ್‌ನಿಂದ 746 ಯುರೋ ಮಿಲಿಯನ್ ದಂಡ ವಿಧಿಸಲಾಗಿತ್ತು. ಹಾಗೆಯೇ ಐರಿಶ್ ಡೇಟಾ ಪ್ರೊಟೆಕ್ಷನ್ ಕಮಿಷನ್ ಮೆಟಾದ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್ಆ್ಯಪ್ ವಿರುದ್ಧ ಕಳೆದ ಎರಡು ವರ್ಷಗಳಲ್ಲಿ 405 ಮಿಲಿಯನ್ ಮತ್ತು 225 ಮಿಲಿಯನ್ ಯುರೋ ದಂಡ ವಿಧಿಸಿದೆ.
ಮೆಟಾದಲ್ಲಿ ಮತ್ತೆ ಉದ್ಯೋಗ ಕಡಿತ: ಮೆಟಾದಲ್ಲಿನ ಉದ್ಯೋಗ ಕಡಿತ ಪರ್ವ ಈಗಲೇ ನಿಲ್ಲುವಂತೆ ಕಾಣಿಸುತ್ತಿಲ್ಲ. ಮುಂದಿನ ವಾರದಿಂದ ಮೆಟಾ ಮತ್ತೆ 600 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ. ಕಂಪನಿಯು ನವೆಂಬರ್‌ನಲ್ಲಿ 11,000 ಕಾರ್ಮಿಕರನ್ನು ವಜಾಗೊಳಿಸಿತ್ತು ಮತ್ತು ಮಾರ್ಚ್ 2023 ರಲ್ಲಿ 10,000 ಉದ್ಯೋಗ ಕಡಿತಗಳನ್ನು ಘೋಷಿಸಿತ್ತು. ಫೇಸ್‌ಬುಕ್‌ನ ಮೂಲ ಕಂಪನಿಯಾದ ಮೆಟಾ ಈಗಾಗಲೇ 4,000 ಉದ್ಯೋಗಿಗಳನ್ನು ತೆಗೆದುಹಾಕಿದೆ. ಅಂದರೆ ಮೇ ತಿಂಗಳಲ್ಲಿ ಇನ್ನೂ 6,000 ಜನರನ್ನು ವಜಾಗೊಳಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ :ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ ಸೌದಿ ಮಹಿಳೆ!