ಲಂಡನ್: ಅಪ್ರಾಪ್ತ ವಯಸ್ಕ ಮಕ್ಕಳು ಪೋರ್ನ್ ಸೈಟ್ಗಳನ್ನು ನೋಡದಂತೆ ನಿರ್ಬಂಧಿಸಲು ಇಂಗ್ಲೆಂಡ್ನ ಇಂಟರ್ನೆಟ್ ನಿಯಂತ್ರಕ ಪ್ರಾಧಿಕಾರವಾಗಿರುವ ಆಫ್ಕಾಮ್ (Ofcom) ಮಂಗಳವಾರ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಹೊಸ ಆನ್ಲೈನ್ ಸುರಕ್ಷತಾ ಕಾಯ್ದೆಯಡಿ, ಪೋರ್ನ್ ವಿಷಯವನ್ನು ಪ್ರದರ್ಶಿಸುವ ಅಥವಾ ಪ್ರಕಟಿಸುವ ವೆಬ್ಸೈಟ್ಗಳು ಮತ್ತು ಅಪ್ಲಿಕೇಶನ್ಗಳು ಅಪ್ರಾಪ್ತ ಮಕ್ಕಳಿಗೆ ತಮ್ಮ ವೆಬ್ಸೈಟ್ನಲ್ಲಿನ ಪೋರ್ನ್ ಕಂಟೆಂಟ್ ಸಿಗದಂತೆ ನೋಡಿಕೊಳ್ಳಬೇಕು ಎಂದು ಆಫ್ಕಾಮ್ ಸೂಚಿಸಿದೆ.
ಮಕ್ಕಳು ಪೋರ್ನ್ ನೋಡದಂತೆ ತಡೆಯಲು ನೋಡುಗನ ಫೋಟೊ ಐಡಿ ಮ್ಯಾಚ್ ಮಾಡಲು ಕೇಳಬಹುದು, ಮುಖದ ಸ್ಕ್ಯಾನಿಂಗ್ ಮೂಲಕ ವಯಸ್ಸು ನಿರ್ಣಯಿಸಬಹುದು ಅಥವಾ ವಯಸ್ಸಿನ ಪುರಾವೆಗಾಗಿ ಕ್ರೆಡಿಟ್ ಕಾರ್ಡ್ ಮಾಹಿತಿ ನೀಡುವಂತೆ ಕೋರಬಹುದು. ಹಾಗೆಯೇ ಪೋರ್ನ್ ನೋಡುವ ವಯಸ್ಕರ ಹಕ್ಕನ್ನು ರಕ್ಷಿಸಬಹುದು ಎಂದು ನಿಯಂತ್ರಕ ಸಂಸ್ಥೆ ಹೇಳಿದೆ.
ತಾನು ಸೂಚಿಸಿದ ನಿಯಮಗಳನ್ನು ಜಾರಿ ಮಾಡದ ಕಂಪನಿಗಳಿಗೆ ದಂಡ ವಿಧಿಸಲಾಗುವುದು ಹಾಗೂ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಆಫ್ಕಾಮ್ ಎಚ್ಚರಿಕೆ ನೀಡಿದೆ. ಆಫ್ಕಾಮ್ ಈ ಬಗ್ಗೆ 2025 ರ ಆರಂಭದಲ್ಲಿ ತನ್ನ ಅಂತಿಮ ಮಾರ್ಗಸೂಚಿಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಅದರ ನಂತರ ಸರ್ಕಾರ ಈ ಮಾರ್ಗಸೂಚಿಗಳನ್ನು ಕಾನೂನಾಗಿ ಮಾಡಲಿದೆ.
ವಾಸ್ತವಿಕ ವಯಸ್ಸನ್ನು ಪರಿಶೀಲಿಸಲು ಹಲವಾರು ವಿಧಾನಗಳನ್ನು ನಾವು ಪ್ರಸ್ತಾಪಿಸಿದ್ದೇವೆ. ಬಳಕೆದಾರರು ತಮ್ಮನ್ನು ತಾವು ವಯಸ್ಕರು ಎಂದು ದೃಢೀಕರಿಸುವ ದುರ್ಬಲ ನಿರ್ಬಂಧ ಕ್ರಮಗಳ ಬಗ್ಗೆ ನಮಗೆ ಅರಿವಿದೆ. ಅಂಥ ಕ್ರಮಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಆಫ್ಕಾಮ್ನ ಮುಖ್ಯ ಕಾರ್ಯನಿರ್ವಾಹಕ ಡೇಮ್ ಮೆಲಾನಿ ಡೇವ್ಸ್ ಹೇಳಿದರು.
ಇತ್ತೀಚಿನ ಸಂಶೋಧನೆಯ ಪ್ರಕಾರ ಮಕ್ಕಳು ಆನ್ಲೈನ್ನಲ್ಲಿ ಮೊದಲ ಬಾರಿಗೆ ಪೋರ್ನ್ ನೋಡುವ ಸರಾಸರಿ ವಯಸ್ಸು 13 ಆಗಿದೆ. ಅದರಲ್ಲಿ ಸುಮಾರು ಕಾಲು ಭಾಗದಷ್ಟು ಮಕ್ಕಳು 11 ನೇ ವಯಸ್ಸಿನಲ್ಲಿ (27 ಪ್ರತಿಶತ) ಮತ್ತು 10 ರಲ್ಲಿ ಒಬ್ಬರು 9 (10 ಪ್ರತಿಶತ)ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಪೋರ್ನ್ ನೋಡುತ್ತಾರೆ.
ವಯಸ್ಸಿನ ಪರಿಶೀಲನೆ, ವಯಸ್ಸಿನ ಅಂದಾಜು ಅಥವಾ ಎರಡರ ಸಂಯೋಜನೆ ಮೂಲಕ ವೆಬ್ಸೈಟ್ಗಳು ಮತ್ತು ಅಪ್ಲಿಕೇಶನ್ಗಳು 'ವಯಸ್ಸಿನ ದೃಢೀಕರಣ' ವನ್ನು ಜಾರಿಗೊಳಿಸಬೇಕು. ಈ ಮೂಲಕ ಬಳಕೆದಾರ ಮಗುವಾ ಅಥವಾ ಅಲ್ಲವಾ ಎಂಬುದನ್ನು ನಿಖರವಾಗಿ ತಿಳಿಯಬೇಕು ಎಂದು ಆಫ್ಕಾಮ್ ಹೇಳಿದೆ. ಮಕ್ಕಳನ್ನು ರಕ್ಷಿಸುವ ಸಾಧನವಾಗಿ ಆನ್ಲೈನ್ ಪೋರ್ನ್ ವೆಬ್ಸೈಟ್ಗಳಲ್ಲಿ ವಯಸ್ಸಿನ ದೃಢೀಕರಣ ಅಳವಡಿಕೆಯನ್ನು ಬಹುಪಾಲು ಜನ ವ್ಯಾಪಕವಾಗಿ ಬೆಂಬಲಿಸುತ್ತಾರೆ.
ಇದನ್ನೂ ಓದಿ:ಅಕ್ಟೋಬರ್ನಲ್ಲಿ 75 ಲಕ್ಷ ಖಾತೆ ಬ್ಯಾನ್ ಮಾಡಿದ ವಾಟ್ಸ್ಆ್ಯಪ್