ನವದೆಹಲಿ:ಪ್ರತಿ ನಿಮಿಷಕ್ಕೆ 1 ಲಕ್ಷ 42 ಸಾವಿರ ಡಾಲರ್ ಅಥವಾ ಗಂಟೆಗೆ 85 ಲಕ್ಷ ಡಾಲರ್ ಗಳಿಸುತ್ತಾರೆ ಎಂಬ ವರದಿಗಳನ್ನು ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ತಳ್ಳಿ ಹಾಕಿದ್ದಾರೆ. ಇಂಥ ವರದಿಗಳೆಲ್ಲ ಕುಚೋದ್ಯದ ವರದಿಗಳಾಗಿದ್ದು, ಟೆಸ್ಲಾ ಷೇರು ಮೌಲ್ಯ ಕುಸಿದಾಗ ಗಳಿಸುವುದಕ್ಕಿಂತಲೂ ಹೆಚ್ಚು ಕಳೆದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಬಳಕೆದಾರರೊಬ್ಬರು ಮಾಡಿದ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಎಕ್ಸ್ ಮಾಲೀಕ ಮಸ್ಕ್, ನನ್ನ ಬಳಿ ರಾಶಿ ರಾಶಿ ಹಣದ ಕಂತೆಗಳಿಲ್ಲ, ಕಂಪನಿಗಳನ್ನು ಆರಂಭಿಸುವಾಗ ಅವುಗಳಲ್ಲಿ ನಾನು ವಹಿಸಿದ ಪಾತ್ರಕ್ಕಾಗಿ ಷೇರುಗಳನ್ನು ಹೊಂದಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.
ತಾಂತ್ರಿಕವಾಗಿ ನೋಡುವುದಾದರೆ ಟೆಸ್ಲಾ ಷೇರು ಮೌಲ್ಯ ಕುಸಿದಾಗಲೆಲ್ಲ ನಾನು ಕಳೆದುಕೊಳ್ಳುವುದೇ ಹೆಚ್ಚು ಎಂದು ಅವರು ಉತ್ತರಿಸಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮಸ್ಕ್ ಅವರ ಸಂಪತ್ತು ಪ್ರತಿ ಸೆಕೆಂಡಿಗೆ ಸರಾಸರಿ 2,378 ಡಾಲರ್ನಷ್ಟು ಹೆಚ್ಚಳವಾಗಿದೆ ಎಂದು ವರದಿಯೊಂದು ತಿಳಿಸಿತ್ತು. "ಅವರು ನಿಮಿಷಕ್ಕೆ 1,42,680 ಅಥವಾ ಗಂಟೆಗೆ 8,560,800 ಡಾಲರ್ ಆದಾಯ ಗಳಿಸುತ್ತಿದ್ದಾರೆ. ಮಸ್ಕ್ ಎಂಟು ಗಂಟೆಗಳ ಕಾಲ ಮಲಗಿ ಮರುದಿನ ಬೆಳಗ್ಗೆ ಎಚ್ಚರಗೊಂಡಾಗ ಅವರು 68,486,400 ಡಾಲರ್ ಶ್ರೀಮಂತರಾಗಿರುತ್ತಾರೆ" ಎಂದು ವರದಿ ಹೇಳಿದೆ.