ನವದೆಹಲಿ : ಉದ್ಯಮದ ಮೂಲಗಳ ಪ್ರಕಾರ, ಹಿಂದಿನ ಹಣಕಾಸು ವರ್ಷ 2023 ರಲ್ಲಿ ಭಾರತೀಯ ಸ್ಮಾರ್ಟ್ಫೋನ್ಗಳ ರಫ್ತು ಪ್ರಮಾಣ 10 ಶತಕೋಟಿ ಯುಎಸ್ ಡಾಲರ್ (ರೂ. 82,000 ಕೋಟಿಗಿಂತ ಹೆಚ್ಚು) ದಾಟುವ ಸಾಧ್ಯತೆಯಿದೆ. ಆಪಲ್‌ನ 'ಮೇಕ್ ಇನ್ ಇಂಡಿಯಾ' ಸ್ಮಾರ್ಟ್‌ಫೋನ್‌ಗಳು ಈಗ ಒಟ್ಟು ರಫ್ತಿನ ಶೇಕಡಾ 50 ರಷ್ಟು ಪಾಲು ಹೊಂದಿವೆ. ಅದೇ ರೀತಿ ಸ್ಯಾಮ್‌ಸಂಗ್ ಶೇಕಡಾ 40 ರಷ್ಟು ಮತ್ತು ಇತರ ಸ್ಮಾರ್ಟ್‌ಫೋನ್ ಕಂಪನಿಗಳ ರಫ್ತು ಪಾಲು ಉಳಿದ ಶೇಕಡಾ 10 ರಷ್ಟಿದೆ ಎಂದು ಏಷ್ಯನ್ ಲೈಟ್ ವರದಿ ಮಾಡಿದೆ.
ಭಾರತವು ತನ್ನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿ ಪ್ರಬಲವಾಗಿದ್ದು, ಜಾಗತಿಕವಾಗಿ ಛಾಪು ಮೂಡಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನೆಯ ಬಗ್ಗೆ ಸರ್ಕಾರವು ಹೆಚ್ಚು ಗಮನ ಹರಿಸುತ್ತಿದೆ. ಟೆಲಿಕಾಂ ಉದ್ಯಮವು ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿದೆ. ಹೀಗಾಗಿ ಜಾಗತಿಕ ಸ್ಮಾರ್ಟ್‌ಫೋನ್ ಉತ್ಪಾದನಾ ಕಂಪನಿಗಳು ಈಗ ಭಾರತಕ್ಕೆ ಆದ್ಯತೆ ನೀಡುತ್ತಿವೆ. ಇತ್ತೀಚೆಗೆ, ಸ್ಯಾಮ್‌ಸಂಗ್ ಭಾರತದಲ್ಲಿ ವಿಶ್ವದ ಅತಿದೊಡ್ಡ ಫೋನ್ ಉತ್ಪಾದನಾ ಘಟಕವನ್ನು ತೆರೆಯಿತು. ಆಪಲ್‌ನಂತಹ ಇತರ ಪ್ರಮುಖ ಜಾಗತಿಕ ಕಂಪನಿಗಳು ಹಲವಾರು ಘಟಕಗಳನ್ನು ಭಾರತಕ್ಕೆ ಸ್ಥಳಾಂತರಿಸಿವೆ. ಓಪ್ಪೊ, ವಿವೊ, ಶಿಯೋಮಿ ಮತ್ತು ಲಾವಾ ನಂಥ ಜಾಗತಿಕ ಉದ್ಯಮಗಳು ಭಾರತದಲ್ಲಿ ತಮ್ಮ ನೆಲೆ ಸ್ಥಾಪಿಸಿವೆ ಮತ್ತು ಕಾರ್ಯಾಚರಣೆಯನ್ನು ವಿಸ್ತರಿಸಿವೆ ಎಂದು ಏಷ್ಯನ್ ಲೈಟ್ ವರದಿ ಮಾಡಿದೆ.
ಮೊಬೈಲ್ ಫೋನ್ ಉದ್ಯಮವು 40 ಶತಕೋಟಿ ಯುಎಸ್ ಡಾಲರ್ ಮೌಲ್ಯದಷ್ಟು ಉತ್ಪಾದನೆಯನ್ನು ದಾಟುತ್ತದೆ ಮತ್ತು ಅದರಲ್ಲಿ 10 ಶತಕೋಟಿ ಯುಎಸ್ ಡಾಲರ್ ನಷ್ಟು ರಫ್ತು ಮಾಡಿದ್ದು ಬಹುದೊಡ್ಡ ಸಾಧನೆಯಾಗಿದೆ ಎಂದು ಐಸಿಇಏ ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳಿದ್ದಾರೆ. ಉತ್ಪಾದನೆ ಸಂಯೋಜಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಗಳ (production-linked incentive PLI schemes) ಕಾರಣಗಳಿಂದ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಭಾರತದಿಂದ ಸ್ಮಾರ್ಟ್‌ಫೋನ್ ರಫ್ತುಗಳು ದ್ವಿಗುಣಗೊಂಡಿದೆ.