ಪೆನ್ಸಿಲ್ವೇನಿಯಾ (ಅಮೆರಿಕ): ಶೀತ ಮತ್ತು ಜ್ವರ ಸಂಬಂಧಿತ ಕೆಮ್ಮುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಡೆಕ್ಸ್ಟ್ರೋಮೆಥೋರ್ಫಾನ್ ನಂಥ ಔಷಧಗಳನ್ನು ವ್ಯಕ್ತಿಗಳು ಧೂಮಪಾನ ತ್ಯಜಿಸಲು ಸಹಾಯ ಮಾಡಲು ಮರುಬಳಕೆ ಮಾಡಬಹುದೇ ಎಂಬ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಪೆನ್ ಸ್ಟೇಟ್ ಕಾಲೇಜ್ ಆಫ್ ಮೆಡಿಸಿನ್ ಮತ್ತು ಮಿನ್ನೇಸೋಟ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಸಂಶೋಧನೆ ನಡೆಸಿದ್ದಾರೆ.
ಔಷಧಗಳ ಸಂಶೋಧನೆಗಾಗಿ ಅವರು ಅತ್ಯಾಧುನಿಕ ಮಶೀನ್ ಲರ್ನಿಂಗ್ ತಂತ್ರಜ್ಞಾನವನ್ನು ರಚಿಸಿದ್ದಾರೆ. ಈ ಮಶೀನ್ ಲರ್ನಿಂಗ್ ತಂತ್ರಜ್ಞಾನವು ಡೇಟಾ ಸೆಟ್‌ಗಳಲ್ಲಿನ ಮಾದರಿಗಳು ಮತ್ತು ಪ್ರವೃತ್ತಿಗಳನ್ನು ಅಭ್ಯಸಿಸಲು ಕಂಪ್ಯೂಟರ್ ಪ್ರೋಗ್ರಾಂಗಳನ್ನು ಬಳಸುತ್ತದೆ. ಕೆಲವ ಔಷಧಗಳನ್ನು ಈಗಾಗಲೇ ಕ್ಲಿನಿಕಲ್ ಟ್ರಯಲ್ಸ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಧೂಮಪಾನವು ಅಮೆರಿಕ ದೇಶದಲ್ಲಿ ವಾರ್ಷಿಕವಾಗಿ ಸುಮಾರು 5 ಲಕ್ಷ ಸಾವುಗಳಿಗೆ ಕಾರಣವಾಗುತ್ತದೆ. ಧೂಮಪಾನವು ಉಸಿರಾಟದ ಕಾಯಿಲೆಗಳು, ಕ್ಯಾನ್ಸರ್ ಮತ್ತು ಹೃದಯರಕ್ತನಾಳದ ಕಾಯಿಲೆಗಳಿಗೆ ಮೂಲ ಕಾರಣವಾಗಿದೆ. ಧೂಮಪಾನದ ಅಭ್ಯಾಸಗಳನ್ನು ಕಲಿಯಬಹುದು ಮತ್ತು ಬಿಟ್ಟು ಬಿಡಬಹುದು. ಹೀಗೆ ಮಾಡುವುದರಲ್ಲಿ ವ್ಯಕ್ತಿಯೊಬ್ಬನ ಆನುವಂಶಿಕತೆ ಕೂಡ ಪರಿಣಾಮ ಬೀರುತ್ತದೆ. ಕೆಲವು ಜೀನ್‌ಗಳನ್ನು ಹೊಂದಿರುವ ಜನರು ತಂಬಾಕಿಗೆ ವ್ಯಸನಿಯಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಹಿಂದಿನ ಅಧ್ಯಯನಗಳಲ್ಲಿ ಕಂಡುಕೊಂಡಿದ್ದಾರೆ.
ಏನಿದು ಸಂಶೋಧನೆ,ಯಾರ ನೇತೃತ್ವದಲ್ಲಿ ನಡೆಯುತ್ತಿದೆ;1.3 ಮಿಲಿಯನ್‌ಗಿಂತಲೂ ಹೆಚ್ಚು ಜನರ ಆನುವಂಶಿಕ ಡೇಟಾವನ್ನು ಬಳಸಿಕೊಂಡು ಸಾರ್ವಜನಿಕ ಆರೋಗ್ಯ ವಿಜ್ಞಾನಗಳ ಪ್ರಾಧ್ಯಾಪಕ ಡಾಜಿಯಾಂಗ್ ಲಿಯು ಮತ್ತು ಸಾರ್ವಜನಿಕ ಆರೋಗ್ಯ ವಿಜ್ಞಾನಗಳ ಸಹಾಯಕ ಪ್ರಾಧ್ಯಾಪಕರಾಗಿರುವ ಬಿಬೋ ಜಿಯಾಂಗ್ ಈ ದೊಡ್ಡ ಡೇಟಾ ಸೆಟ್‌ಗಳನ್ನು ಅಧ್ಯಯನ ಮಾಡುವ ಸಂಶೋಧನೆಯ ನೇತೃತ್ವ ವಹಿಸಿದ್ದಾರೆ. ಈ ಸಂಶೋಧನೆಯು ಡೇಟಾ ಸೆಟ್ ಅಧ್ಯಯನ ಮಾಡಲು ಮಶೀನ್ ಲರ್ನಿಂಗ್ ತಂತ್ರಜ್ಞಾನ ಬಳಸುತ್ತದೆ. ಇದರಲ್ಲಿ ಬಳಸಲಾಗುವ ಡೇಟಾ ವ್ಯಕ್ತಿಯ ತಳಿಶಾಸ್ತ್ರ ಮತ್ತು ಅವರು ತಾವೇ ತಿಳಿಸಿದ ಧೂಮಪಾನ ನಡವಳಿಕೆಗಳ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಒಳಗೊಂಡಿರುತ್ತದೆ.