ನವದೆಹಲಿ :ಎಲೆಕ್ಟ್ರಾನಿಕ್ ಉಪಕರಣ ತಯಾರಿಕಾ ಸಂಸ್ಥೆಯಾಗಿರುವ ಎಲ್ಜಿ ಇಂಟರ್ನ್ಯಾಷನಲ್ ಸದ್ಯ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಲಯದಲ್ಲಿ ಹೊಸ ಹೂಡಿಕೆಗೆ ಮುಂದಾಗಿದೆ. ಇದಕ್ಕಾಗಿ ದಕ್ಷಿಣ ಕೊರಿಯಾ ಮೂಲದ ಟೆಲಿಕಾಂ ಸಂಸ್ಥೆ ಕೆಟಿ ಕಾರ್ಪೊರೇಷನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಎಲ್ಜಿ ತನ್ನ ಮೊಬೈಲ್ ತಯಾರಿಕಾ ಘಟಕವನ್ನು ಬಂದ್ ಮಾಡುವುದಾಗಿ ಘೋಷಿಸಿದ ಮಾರನೇ ದಿನವೇ, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಹೊಸ ಹೂಡಿಕೆಗೆ ಮುಂದಾಗಿದೆ. ಕೆ ಟಿ ಸಂಸ್ಥೆಯ ಜೊತೆ ಜಂಟಿಯಾಗಿ ಎಐ ತಂತ್ರಜ್ಞಾನ ಅಭಿವೃದ್ಧಿಗೆ ಶ್ರಮಿಸುವುದಾಗಿ ಕಂಪನಿ ತಿಳಿಸಿದೆ.
ಇತ್ತೀಚೆಗಷ್ಟೇ ಎರಡೂ ಸಂಸ್ಥೆಗಳು ತಮ್ಮ ಎಲ್ಜಿ ಥಿಂಕ್ ಮತ್ತು ಕೆಟಿಯ ಗಿಗಾ ಜಿನೈ ಎಂಬ ಎಐ ಪ್ಲಾಟ್ಫಾರ್ಮ್ಗಳ ನಡುವಿನ ಹೊಂದಾಣಿಕೆ ಪರಿಶೀಲಿಸಿದ್ದವು. ದಕ್ಷಿಣ ಕೊರಿಯಾ ಟೆಕ್ ದೈತ್ಯ ಸಂಸ್ಥೆಯಾಗಿರುವ ಕೆ ಟಿ ಈಗಾಗಲೇ ಸ್ಮಾರ್ಟ್ಹೋಮ್ ಪರಿಕರಗಳಲ್ಲಿ ಎಐ ತಂತ್ರಜ್ಞಾನ ಅಳವಡಿಸಿ ಅದರಲ್ಲಿ ಯಶಸ್ವಿಯೂ ಆಗಿದೆ.
ಇದಲ್ಲದೆ ಇತ್ತೀಚೆಗೆ ಈ ಸಂಸ್ಥೆ ಹ್ಯುಂಡೈ ಹೆವಿ ಇಂಡಸ್ಟ್ರೀಸ್, ಎಲ್ಜಿ ಅಪ್ಲಸ್ ಕಾರ್ಪ್, ಡಾಂಗ್ವಾನ್ ಗ್ರೂಪ್ ಮತ್ತು ಕೊರಿಯಾ ಅಡ್ವಾನ್ಸ್ಡ್ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಜೊತೆ ಎಐ ತಂತ್ರಜ್ಞಾನ ಅಭಿವೃದ್ಧಿಗೆ ಮುಂದಾಗಿದೆ.
ಎಲ್ಜಿ ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನ ವಲಯದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಮುಂದೆ ಬರುತ್ತಿದೆ. ಮುಖ್ಯವಾಗಿ ಮುಕ್ತ ಪ್ಲಾಟ್ಫಾರ್ಮ್ಗಳಲ್ಲಿ ಹೂಡಿಕೆಗೆ ಆಸಕ್ತಿ ವಹಿಸಿದೆ. ನಿನ್ನೆಯಷ್ಟೇ ಎಲ್ಜಿ ತನ್ನ ಮೊಬೈಲ್ ಉತ್ಪಾದನಾ ಘಟಕವನ್ನು ಬಂದ್ ಮಾಡುವುದಾಗಿ ತಿಳಿಸಿತ್ತು. ಕಳೆದ ಕೆಲ ವರ್ಷಗಳಿಂದ ನಿರಂತರ ನಷ್ಟ ಹೊಂದಿದ ಪರಿಣಾಮ ಈ ನಿರ್ಧಾರಕ್ಕೆ ಬಂದಿತ್ತು.