ನವದೆಹಲಿ: ದೇಶೀಯ ಸ್ಮಾರ್ಟ್ಫೋನ್ ಬ್ರಾಂಡ್ ಲಾವಾ ಗುರುವಾರ 6.78 ಇಂಚಿನ ಡಿಸ್ ಪ್ಲೇ ಮತ್ತು 8 ಜಿಬಿ ರ್‍ಯಾಮ್ ಹೊಂದಿರುವ ಹೊಸ ಸ್ಟಾರ್ಮ್ 5 ಜಿ (Storm 5G) ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಗೇಲ್ ಗ್ರೀನ್ ಮತ್ತು ಥಂಡರ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ಆಯ್ದ ಬ್ಯಾಂಕ್ಗಳ ಆಫರ್ ಅಡಿ 11,999 ರೂ.ಗಳ ವಿಶೇಷ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದು ಡಿಸೆಂಬರ್ 28 ರಿಂದ ಅಮೆಜಾನ್ ಮತ್ತು ಲಾವಾ ಇ-ಸ್ಟೋರ್ನಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.
"ಲಾವಾ ಸ್ಟಾರ್ಮ್ 5 ಜಿ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್, 8 ಜಿಬಿ ರ್‍ಯಾಮ್ ಮತ್ತು ಅತ್ಯಾಧುನಿಕ 50 ಎಂಪಿ + 8 ಎಂಪಿ ಕ್ಯಾಮೆರಾ ಸೆಟಪ್ನೊಂದಿಗೆ ಸ್ಟಾರ್ಮ್ 5ಜಿ ಕೇವಲ ಸಾಧನವಲ್ಲ, ಇದೊಂದು ಉತ್ಕೃಷ್ಟ ಅನುಭವವಾಗಿದೆ" ಎಂದು ಲಾವಾ ಇಂಟರ್ ನ್ಯಾಷನಲ್ ಲಿಮಿಟೆಡ್ನ ಪ್ರಾಡಕ್ಟ್ ಹೆಡ್ ಸುಮಿತ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಟಾರ್ಮ್ 5 ಜಿ ಮೀಡಿಯಾಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಒಳಗೊಂಡಿದ್ದು, 4,20,000 ಕ್ಕೂ ಹೆಚ್ಚು AnTuTu ಸ್ಕೋರ್ ಅನ್ನು ಹೊಂದಿದೆ. ಇದರ ಶಕ್ತಿಯುತ ಪ್ರೊಸೆಸರ್ನಿಂದ ಅಡೆತಡೆಯಿಲ್ಲದೇ ನೀವು ಇದನ್ನು ಗೇಮಿಂಗ್ಗಾಗಿ ಬಳಸಬಹುದು. ಇದು 16 ಜಿಬಿ ವರೆಗೆ ವಿಸ್ತರಿಸಬಹುದಾದ ಲ್ಯಾಗ್-ಫ್ರೀ ಅನುಭವಕ್ಕಾಗಿ ಈ ಶ್ರೇಣಿಯಲ್ಲಿಯೇ ಅತ್ಯುತ್ತಮವಾದ 8 ಜಿಬಿ ರ‍್ಯಾಮ್ ಹೊಂದಿದೆ. ಹೀಗಾಗಿ ಉತ್ಸಾಹಿ ಗೇಮರ್ಗಳಿಗೆ ಈ ಫೋನ್ ಸೂಕ್ತವಾಗಿದೆ.