ನವದೆಹಲಿ:1980ರ ದಶಕ ಅಂದರೆ, ಸ್ಮಾರ್ಟ್ಫೋನ್ ಯುಗ ಆರಂಭಕ್ಕೂ ಮೊದಲು ಪ್ರತಿಯೊಬ್ಬರೂ ತಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ನೆರೆಹೊರೆಯವರೊಂದಿಗೆ ವಿವಿಧ ವಿಚಾರಗಳ ಬಗ್ಗೆ ಹರಟುತ್ತಾ ಸಮಯ ಕಳೆಯುತ್ತಿದ್ದರು. ಆದರೀಗ ಇಂಟರ್ನೆಟ್ ಬಂದ ಮೇಲೆ, ಅದರಲ್ಲೂ ಅದು ಭಾರೀ ಅಗ್ಗಕ್ಕೆ ಸಿಕ್ಕ ಮೇಲೆ ಮನುಷ್ಯ ಮೊಬೈಲ್ನಲ್ಲೇ ಮುಳುಗಿ ಹೋಗಿದ್ದಾರೆ.
ನಿರಂತರವಾಗಿ ಅಂತರ್ಜಾಲದಲ್ಲಿ ಅನ್ವೇಷಿಸಲು ಸಮಯ ಕಳೆದು ಅದರಲ್ಲೇ ಆತ ತನ್ನ ಮನಸ್ಸಿಗೆ ಮುದ ನೀಡುವ ಕ್ರಿಯೆಗಳನ್ನು ಮಾಡುತ್ತಿದ್ದಾನೆ. ಅದನ್ನೇ ಆ ವ್ಯಕ್ತಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿಷಯವನ್ನು ಹಂಚಿಕೊಳ್ಳುತ್ತಾನೆ. ಹಳ್ಳಿ ಸೊಗಡಿನ ಜಾನಪದ, ವೈವಿಧ್ಯತೆ, ಹೊಸ ಆವಿಷ್ಕಾರಗಳು ಸೇರಿದಂತೆ ಎಲ್ಲದರ ಬಗೆಗಿನ ಚರ್ಚೆಗಳು ನಡೆದರೂ ಅದು ಅಂತರ್ಜಾಲ ಮಾತ್ರ ಎಂಬುದು ವಿಶೇಷ.
ಹೀಗೆ ಅಂತರ್ಜಾಲವನ್ನು ಹೇರಳವಾಗಿ ಬಳಸಿ ಚಾಟ್ ಮಾಡುವ ದೇಶದ ರಾಜ್ಯಗಳು ಯಾವುದು ಎಂಬುದನ್ನು ಸಾಮಾಜಿಕ ಮಾಧ್ಯಮವಾದ "ಶೇರ್‌ಚಾಟ್" ಅಧ್ಯಯನ ನಡೆಸಿದೆ. ಅದರಲ್ಲಿ ನಮ್ಮ ಹಮ್ಮೆಯ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ನಂತರದ ಸ್ಥಾನದಲ್ಲಿವೆ.
ಚಿನ್ನದ ನಾಡು ಕರ್ನಾಟಕಕ್ಕೆ ಮೊದಲ ಶ್ರೇಯ:ಮಾಸಿಕವಾಗಿ 11.3 ಮಿಲಿಯನ್ ಜನರು ಸ್ಥಳೀಯ ಭಾಷೆಯಲ್ಲೇ ವಿವಿಧ ವಿಷಯಗಳ ಮೇಲೆ ಅತಿಹೆಚ್ಚು ಚಾಟ್ ಮಾಡಿದ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. "ಭಾರತದ ಚಾಟಿಯೆಸ್ಟ್" ರಾಜ್ಯ ಎಂದು ಗುರುತಿಸಿಕೊಂಡಿದೆ.
ಸಾವಿರಾರು ಬಳಕೆದಾರರು ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳನ್ನು ಲೈವ್ ಆಡಿಯೊ ಚಾಟ್‌ರೂಮ್‌ಗಳ ಮೂಲಕ ವೀಕ್ಷಿಸಿ ಕನ್ನಡ ಕ್ಷೇತ್ರದಲ್ಲಿ ಸಾಕಷ್ಟು ಹವಾ ಸೃಷ್ಟಿಸಿದ್ದಾರೆ. ಶೇರ್ಚಾಟ್ನಲ್ಲಿ 0.26 ಮಿಲಿಯನ್‌ಗಿಂತಲೂ ಹೆಚ್ಚು ಕನ್ನಡ ಬಳಕೆದಾರರು ತಿಂಗಳೊಂದರಲ್ಲಿ ಸುಮಾರು 3.1 ಮಿಲಿಯನ್ ಅನನ್ಯ ವಿಷಯವನ್ನು ವೀಕ್ಷಿಸಿದ್ದಾರೆ. ಜನಪ್ರಿಯ ಕನ್ನಡ ಚಾಟ್‌ರೂಮ್‌ಗಳಾದ ನಮ್ಮ ಅಡ್ಡ, ನಟರು, ಗಾಯಕರು, ಪತ್ರಕರ್ತರು, ವೈದ್ಯರು ಮತ್ತು ಸಾಹಿತಿಗಳು ವಿವಿಧ ವಿಷಯಗಳಲ್ಲಿ ಚರ್ಚಿಸಲು ಇದನ್ನು ಬಳಕೆ ಮಾಡಿದ್ದಾರೆ.
ಕರ್ನಾಟಕದ ಖ್ಯಾತನಾಮರಾದ ವಿನಾಯಕ್ ಜೋಶಿ, ವಾಣಿ ಹರಿಕೃಷ್ಣ, ಶಶಾಂಕ್ ಶೇಷಗಿರಿ, ಮಾಸ್ಟರ್ ಮಂಜುನಾಥ್ ಸಹ ಹಲವಾರು ಚಾಟ್‌ರೂಮ್ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕನ್ನಡ ಸಮುದಾಯದ ಒಟ್ಟು 30 ಸಾವಿರಕ್ಕೂ ಅಧಿಕ ಪ್ರೇಕ್ಷಕರೊಂದಿಗೆ ಶೇರ್‌ಚಾಟ್ ಆಡಿಯೊ ಚಾಟ್‌ರೂಮ್‌ನಲ್ಲಿ ನಡೆದ ವಿಶೇಷ 'ಸ್ವರ ಸಂಜೆ' ಕಾರ್ಯಕ್ರಮದಲ್ಲಿ ಜನಪ್ರಿಯ ಕನ್ನಡ ಸಂಯೋಜಕ ಮಣಿಕಾಂತ್ ಕದ್ರಿ ಮತ್ತು ಹಿನ್ನೆಲೆ ಗಾಯಕಿ ಸುಪ್ರಿಯಾ ರಾಮ್ ಜ್ಯಾಮ್ ನಡೆಸಿಕೊಡುತ್ತಿರುವುದು ಕಂಡುಬಂದಿದೆ.