ಸ್ಯಾನ್ ಫ್ರಾನ್ಸಿಸ್ಕೊ :ಅಮೆರಿಕದ ವೈಸ್ ಪ್ರೆಸಿಡೆಂಟ್ ಕಮಲಾ ಹ್ಯಾರಿಸ್ ಅವರು ಗೂಗಲ್, ಮೈಕ್ರೊಸಾಫ್ಟ್ ಮತ್ತು ಓಪನ್ ಎಐ (ಚಾಟ್‌ಜಿಪಿಟಿಯ ಡೆವಲಪರ್) ನ ಸಿಇಒ ಗಳನ್ನು ಭೇಟಿ ಮಾಡಲಿದ್ದಾರೆ. ಕೃತಕ ಬುದ್ಧಿಮತ್ತೆ (AI) ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಸುರಕ್ಷಿತವಾಗಿಸುವುದು ಹೇಗೆ ಅದರ ಸಂಭಾವ್ಯ ಅಪಾಯಗಳನ್ನು ತಗ್ಗಿಸುವುದು ಹೇಗೆ ಎಂಬುದರ ಬಗ್ಗೆ ಅವರು ಚರ್ಚೆ ನಡೆಸಲಿದ್ದಾರೆ.
ಗುರುವಾರ ನಡೆಯಲಿರುವ ಮುಕ್ತ ಚರ್ಚೆಯಲ್ಲಿ ಹ್ಯಾರಿಸ್, ಎಐ ತಂತ್ರಜ್ಞಾನವನ್ನು ನೈತಿಕ ಮತ್ತು ವಿಶ್ವಾಸಾರ್ಹವಾಗಿಸಲು ಕೈಗೊಳ್ಳಬೇಕಾದ ರಕ್ಷಣಾತ್ಮಕ ಕ್ರಮಗಳ ಅಗತ್ಯವನ್ನು ಒತ್ತಿಹೇಳಲಿದ್ದಾರೆ ಎಂದು ಶ್ವೇತಭವನ ಹೇಳಿದೆ. ವೈಟ್ ಹೌಸ್ನ ಹಿರಿಯ ಸದಸ್ಯರಾದ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೋ, ಅಧ್ಯಕ್ಷ ಜೋ ಬೈಡನ್ ಅವರ ಸಿಬ್ಬಂದಿ ಮುಖ್ಯಸ್ಥ ಜೆಫ್ ಝಿಂಟ್ಸ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಕಚೇರಿಯ ನಿರ್ದೇಶಕರಾದ ಆರತಿ ಪ್ರಭಾಕರ್ ಇವರೆಲ್ಲರೂ ಹ್ಯಾರಿಸ್ ಅವರೊಂದಿಗೆ ಉಪಸ್ಥಿತರಿರಲಿದ್ದಾರೆ.
ಈ ಸಭೆಯು ಬಿಡೆನ್ ಆಡಳಿತದ ತಂತ್ರಜ್ಞಾನದ ಬಗ್ಗೆ ತಜ್ಞರೊಂದಿಗೆ ಮಾತುಕತೆ ನಡೆಸುವ ಮತ್ತು AI ಉತ್ಪನ್ನಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿಸುವ ಮೊದಲು ಅವು ಸುರಕ್ಷಿತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ವ್ಯಾಪಕ ಪ್ರಯತ್ನದ ಭಾಗವಾಗಿದೆ. AI ತಂತ್ರಜ್ಞಾನವು ಅಪಾಯಕಾರಿಯಾಗಬಹುದು. ಆದರೆ, ಇದು ಸಮಾಜದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ನೋಡಬೇಕಿದೆ ಎಂದು ಅಧ್ಯಕ್ಷ ಜೋ ಬೈಡನ್ ಕಳೆದ ತಿಂಗಳು ಹೇಳಿದ್ದರು. "ತಂತ್ರಜ್ಞಾನ ಕಂಪನಿಗಳು ನನ್ನ ದೃಷ್ಟಿಯಲ್ಲಿ ತಮ್ಮ ಉತ್ಪನ್ನಗಳನ್ನು ಸಾರ್ವಜನಿಕಗೊಳಿಸುವ ಮೊದಲು ಅವು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಹೊಂದಿವೆ" ಎಂದು ವಿಜ್ಞಾನ ಮತ್ತು ತಂತ್ರಜ್ಞಾನದ ಸಲಹೆಗಾರರ ಅಧ್ಯಕ್ಷರ ಮಂಡಳಿಯ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಬೈಡನ್ ಹೇಳಿದ್ದರು.