ಮುಂಬೈ :ಜನರೇಟಿವ್ ಎಐ ಕ್ಷೇತ್ರವು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತ ಸಾಗಿರುವ ಮಧ್ಯೆ ವಿಶ್ವದಲ್ಲಿ ಇದರಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತಗಳಾಗಲಿವೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ಆದರೆ ಈ ಬಗ್ಗೆ ಸೇಲ್ಸ್‌ಫೋರ್ಸ್ ಇಂಡಿಯಾದ ಸಿಇಓ ಮತ್ತು ಅಧ್ಯಕ್ಷೆ ಹಾಗೂ ಮಾಜಿ ಎಸ್ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಪರ್ಯಾಯ ದೃಷ್ಟಿಕೋನವೊಂದನ್ನು ಮುಂದಿಟ್ಟಿದ್ದಾರೆ. ಎಐ ನಿಂದ ತಾತ್ಕಾಲಿಕವಾಗಿ ಉದ್ಯೋಗಗಳು ಕಡಿತಗೊಳ್ಳಬಹುದಾದರೂ, ಹೊಸ ರೀತಿಯ ಅನೇಕ ಉದ್ಯೋಗವಕಾಶಗಳು ಎಐ ನಿಂದ ಹುಟ್ಟಿಕೊಳ್ಳಲಿವೆ ಎಂದು ಅವರು ಹೇಳಿದ್ದಾರೆ.
ಪ್ರತಿಯೊಂದು ಉದ್ಯಮ ಮತ್ತು ಕ್ರಾಂತಿಯಲ್ಲಿ ನಾವು ಆಗಾಗ ಬೃಹತ್ ಪ್ರಮಾಣದ ಉದ್ಯೋಗ ನಷ್ಟಗಳ ಬಗ್ಗೆ ಮಾತನಾಡಿದ್ದೇವೆ. ಆದರೆ ಇದನ್ನು ತಾತ್ಕಾಲಿಕ ಉದ್ಯೋಗ ನಷ್ಟಗಳು ಎಂಬ ಅರ್ಥದಲ್ಲಿ ನೀವು ಯಾಕೆ ನೋಡುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಜನ ತಮ್ಮ ಕೌಶಲ್ಯದ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿರುವುದು ಹೌದಾದರೂ, ಎಐ ನಿಂದ ವಿಭಿನ್ನ ಪ್ರಕಾರದ ಉದ್ಯೋಗಗಳು ಖಂಡಿತವಾಗಿಯೂ ಹುಟ್ಟಿಕೊಳ್ಳಲಿವೆ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಭಟ್ಟಾಚಾರ್ಯ ಹೇಳಿದರು.
ಇತರ ಅನೇಕ ಅವಕಾಶಗಳು ಸೃಷ್ಟಿಯಾಗಲಿವೆ ಮತ್ತು ನಾವು ಈಗಾಗಲೇ ಉದ್ಯೋಗ ವಲಯದಲ್ಲಿ ಹಲವಾರು ಹೊಸ ರೀತಿಯ ಹುದ್ದೆಗಳ ಬಗ್ಗೆ ಕೇಳುತ್ತಿದ್ದೇವೆ. AI Ethicist ಅಥವಾ Prompt Engineers ಹುದ್ದೆಗಳ ಬಗ್ಗೆ ನಾವು ಈಗಾಗಲೇ ಕೇಳುತ್ತಿದ್ದೇವೆ. ಅಂದರೆ ಹೊಸ ರೀತಿಯ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ತಿಳಿಸಿದರು.
ಇದಲ್ಲದೆ ಕೃತಕ ಬುದ್ಧಿಮತ್ತೆಯ (AI) ಹೊಸ ಕ್ಷೇತ್ರಗಳಲ್ಲಿ ಕೌಶಲ್ಯ ಬೆಳೆಸಲು ಮತ್ತು ಮರು ಕೌಶಲ್ಯ ಕಲಿಸಲು ಸೇಲ್ಸ್‌ಫೋರ್ಸ್ ಸಂಸ್ಥೆಯು ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಸೇಲ್ಸ್‌ಫೋರ್ಸ್ ಕಂಪನಿ ಹೇಳಿದೆ. ತಂತ್ರಜ್ಞಾನದ ಕುರಿತು ಮಾತನಾಡಿದ ಅರುಂಧತಿ ಭಟ್ಟಾಚಾರ್ಯ, ನಮ್ಮ ದೇಶದಲ್ಲಿ ನಾವು ಹೊಂದಿರುವ ಬೃಹತ್ ಜನಸಂಖ್ಯೆಗೆ ವಾಸ್ತವವಾಗಿ ಪ್ರತಿಯೊಂದಕ್ಕೂ ಕಸ್ಟಮೈಸ್ ಮಾಡಬಹುದಾದ ರೀತಿಯಲ್ಲಿ ನಿಮಗೆ ಉತ್ಪಾದಕರಾಗುವ ಸಾಮರ್ಥ್ಯ, ದಕ್ಷತೆಯ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಎಐ ನೀಡಲಿದೆ ಎಂದರು.
ನಾನು ನನ್ನ ಹಿಂದಿನ ಸಂಸ್ಥೆಯಲ್ಲಿ ಕಿರಿಯ ಹುದ್ದೆಯ ಉದ್ಯೋಗಿಯಾಗಿದ್ದಾಗ ಪರಿಸ್ಥಿತಿ ಹೇಗಿತ್ತು ಎಂಬುದು ನನಗೆ ಈಗಲೂ ನೆನಪಿದೆ. ನಾವು ನಮ್ಮ ಕಂಪನಿಯ ಇತರ ಉದ್ಯೋಗಿಗಳೊಂದಿಗೆ ಸಂಪರ್ಕ ಸಾಧಿಸಬೇಕಾದರೆ ಯುನಿಯನ್ ನಾಯಕರ ಮೂಲಕವೇ ಅದನ್ನು ಮಾಡುವುದು ಏಕೈಕ ಮಾರ್ಗವಾಗಿತ್ತು ಮತ್ತು ಆಡಳಿತ ಮಂಡಳಿಯವರು ಜನಸಾಮಾನ್ಯರೊಂದಿಗೆ ಸಂವಹನ ನಡೆಸಲು ಬೇರೆ ಮಾರ್ಗವಿರಲಿಲ್ಲ. ಆದರೆ ನಾನು ಚೇರಮನ್ ಆಗುವ ಹೊತ್ತಿಗೆ, ನಾನು ಪ್ರತಿಯೊಬ್ಬರನ್ನೂ ಅವರ ಹೆಸರಿನಿಂದ ಗುರುತಿಸುತ್ತಿದ್ದೆ. ತಂತ್ರಜ್ಞಾನದ ಕಾರಣದಿಂದಲೇ ನಾನು ಅವರೆಲ್ಲರ ಹೆಸರು ತಿಳಿಯುವಂತಾಗಿತ್ತು. ಅಲ್ಲದೆ ಇದರಿಂದ ಅವರು ಮರಳಿ ನನ್ನೊಂದಿಗೆ ಸಂವಹನ ನಡೆಸಬಹುದಿತ್ತು ಮತ್ತು ಸಲಹೆಗಳನ್ನು ಕೂಡ ನೀಡಬಹುದಿತ್ತು. ಇಂಥದೊಂದು ಸೌಕರ್ಯ ಅದಕ್ಕೂ ಮುನ್ನ ಇರಲಿಲ್ಲ ಎಂದು ಅವರು ಹೇಳಿದರು.
ಎಐ ಮತ್ತು ಜನರೇಟಿವ್ ಎಐ ಪ್ರತಿಯೊಬ್ಬರ ಅವಶ್ಯಕತೆಗಳನ್ನು ಗೌರವಿಸಲು ಮತ್ತು ಬೆಳಕಿಗೆ ತರಲು ಹೈಪರ್ ವೈಯಕ್ತೀಕರಣದ ಶಕ್ತಿಯನ್ನು ನಮಗೆ ನೀಡುತ್ತದೆ ಎಂಬುದು ಅರುಂಧತಿ ಭಟ್ಟಾಚಾರ್ಯ ಅವರ ಅಭಿಪ್ರಾಯವಾಗಿದೆ. ಅರುಂಧತಿ 2016 ರಲ್ಲಿ ಫೋರ್ಬ್ಸ್ ವಿಶ್ವದ 25 ನೇ ಅತ್ಯಂತ ಶಕ್ತಿಶಾಲಿ ಮಹಿಳೆಯಾಗಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಏತನ್ಮಧ್ಯೆ, ಸೇಲ್ಸ್‌ಫೋರ್ಸ್ ಭಾರತದಲ್ಲಿ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮ (MSME) ವ್ಯವಹಾರಗಳಿಗಾಗಿ ಸೇಲ್ಸ್‌ಫೋರ್ಸ್ 'ಸ್ಟಾರ್ಟರ್' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ಇದನ್ನೂ ಓದಿ : WhatsApp Pink scam: ಎಚ್ಚರ; ವಾಟ್ಸ್ಆ್ಯಪ್ ಪಿಂಕ್ ಇನ್ಸ್ಟಾಲ್ ಮಾಡಿದ್ರೆ ಈಗಲೇ ಅನ್ - ಇನ್ಸ್ಟಾಲ್ ಮಾಡಿ!