ಕರ್ನಾಟಕ

karnataka

ETV Bharat / science-and-technology

ಚಂದ್ರನತ್ತ ಜಪಾನ್​; ಲ್ಯಾಂಡರ್​ ಮತ್ತು ಎಕ್ಸ್​ ರೇ ಮಿಷನ್ ನೌಕೆ ಸೋಮವಾರ ಉಡಾವಣೆ ಸಾಧ್ಯತೆ

ಭಾರತದ ಚಂದ್ರಯಾನ ಯಶಸ್ಸಿನ ನಂತರ ಈಗ ಜಪಾನ್​ ಚಂದ್ರನತ್ತ ಬಾಹ್ಯಾಕಾಶ ನೌಕೆ ಉಡಾವಣೆ ಮಾಡಲು ಮುಂದಾಗಿದೆ.

Japan's lunar lander, X-ray mission to launch on Monday
Japan's lunar lander, X-ray mission to launch on Monday

By ETV Bharat Karnataka Team

Published : Aug 27, 2023, 6:31 PM IST

ಟೋಕಿಯೊ: ಭಾರತದ ಚಂದ್ರಯಾನ-3 ಯಶಸ್ಸಿನ ನಂತರ ಈಗ ಜಪಾನ್​ ಚಂದ್ರನತ್ತ ನೌಕೆ ಕಳುಹಿಸಲು ಸಿದ್ಧತೆ ನಡೆಸಿದೆ. ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೋಮವಾರ ಚಂದ್ರನ ಮೇಲ್ಮೈಗೆ ಲ್ಯಾಂಡರ್ ಮತ್ತು ಎಕ್ಸ್-ರೇ ಮಿಷನ್​ ನೌಕೆಯನ್ನು ಉಡಾವಣೆ ಮಾಡಲಿದೆ. ಜಪಾನಿನ ಏರೋಸ್ಪೇಸ್ ಎಕ್ಸ್​ಪ್ಲೊರೇಶನ್ ಏಜೆನ್ಸಿಯ (ಜಾಕ್ಸಾ) ಎಸ್ಎಲ್ಐಎಂ ಅಥವಾ ಸ್ಲಿಮ್ (Smart Lander for Investigating Moon) ಸಣ್ಣ ಪ್ರಮಾಣದ ಹಗುರವಾದ ಸಂಶೋಧನಾ ಕಾರ್ಯಾಚರಣೆ ವ್ಯವಸ್ಥೆಯನ್ನು ಯಶಸ್ವಿಗೊಳಿಸುವ ಮತ್ತು ಭವಿಷ್ಯದ ಚಂದ್ರ ಶೋಧನೆಗಳಿಗೆ ಅಗತ್ಯವಾದ ಪಿನ್ ಪಾಯಿಂಟ್​ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ಇದು ಯಶಸ್ವಿಯಾದರೆ ರಷ್ಯಾ, ಯುಎಸ್, ಚೀನಾ ಮತ್ತು ಭಾರತದ ನಂತರ ಚಂದ್ರನ ಮೇಲೆ ಯಶಸ್ವಿಯಾಗಿ ಮೃದುವಾಗಿ ಇಳಿಯುವ ಐದನೇ ದೇಶ ಜಪಾನ್ ಆಗಲಿದೆ. ಈ ಮಿಷನ್​​ನ ಉಪಗ್ರಹದಲ್ಲಿ ಎಕ್ಸ್-ರೇ ಇಮೇಜಿಂಗ್ ಮತ್ತು ಸ್ಪೆಕ್ಟ್ರೋಸ್ಕೋಪಿ ಮಿಷನ್ (XRISM)ಗಳನ್ನು ಅಳವಡಿಸಲಾಗಿರುತ್ತದೆ. ಇದು ವಿಜ್ಞಾನಿಗಳಿಗೆ ನಕ್ಷತ್ರಗಳು ಮತ್ತು ಗ್ಯಾಲಕ್ಸಿಗಳಲ್ಲಿನ ಪ್ಲಾಸ್ಮಾವನ್ನು ವೀಕ್ಷಿಸಲು ಸಹಾಯ ಮಾಡುತ್ತದೆ.

ಶನಿವಾರ ಉಡಾವಣೆಯಾಗಬೇಕಿದ್ದ ಈ ಕಾರ್ಯಾಚರಣೆಯನ್ನು ಹವಾಮಾನ ವೈಪರೀತ್ಯದಿಂದಾಗಿ ಸೋಮವಾರಕ್ಕೆ ಮುಂದೂಡಲಾಗಿತ್ತು. ಇದು ಈಗ ಜಾಕ್ಸಾ ತನೆಗಶಿಮಾ ಬಾಹ್ಯಾಕಾಶ ಕೇಂದ್ರದ (JAXA Tanegashima Space Center) ಯೋಶಿನೊಬು ಉಡಾವಣಾ ಸಂಕೀರ್ಣದಿಂದ ಜಾಕ್ಸಾದ ಎಚ್ 2-ಎ ರಾಕೆಟ್ ನಲ್ಲಿ ಚಂದ್ರನತ್ತ ಉಡಾವಣೆಯಾಗಲಿದೆ.

"ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಇಮೇಜಿಂಗ್ ಸ್ಯಾಟಲೈಟ್ (XRISM) ಮತ್ತು ಸ್ಮಾಲ್ ಲೂನಾರ್ ಲ್ಯಾಂಡರ್ ಡೆಮಾನ್​ಸ್ಟ್ರೇಷನ್ ವೆಹಿಕಲ್ (ಎಸ್ಎಲ್ಐಎಂ) ಹೊತ್ತ ಎಚ್ -2ಎ ರಾಕೆಟ್ ಸಂಖ್ಯೆ 47 ರ ಉಡಾವಣೆಯನ್ನು ಆಗಸ್ಟ್ 27 ಕ್ಕೆ ಮುಂದೂಡಲಾಗಿದೆ. ಆದರೆ ಅವತ್ತು ಕೂಡ ಹವಾಮಾನವು ಹದಗೆಡುವ ನಿರೀಕ್ಷೆಯಿದೆ" ಎಂದು ಜಾಕ್ಸಾ ಹೇಳಿಕೆಯಲ್ಲಿ ತಿಳಿಸಿದೆ. "ನಾಳೆಯಿಂದ ಹವಾಮಾನ ಪರಿಸ್ಥಿತಿಗಳನ್ನು ಅವಲೋಕಿಸಿ ಆಗಸ್ಟ್ 28 ರಂದು ಉಡಾವಣೆ ಸಾಧ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಮರುಪರಿಶೀಲಿಸಲಿದ್ದೇವೆ" ಎಂದು ಅದು ಹೇಳಿದೆ.

ಜಪಾನಿನ ಭಾಷೆಯಲ್ಲಿ "ಮೂನ್ ಸ್ನೈಪರ್" ಎಂದೂ ಕರೆಯಲ್ಪಡುವ ಸ್ಲಿಮ್, ಉಡಾವಣೆಯ 3 ರಿಂದ 4 ತಿಂಗಳ ನಂತರ ಚಂದ್ರನ ಕಕ್ಷೆಗೆ ತಲುಪುವ ನಿರೀಕ್ಷೆಯಿದೆ. ಇದು ಯಶಸ್ವಿಯಾದರೆ, ಬಾಹ್ಯಾಕಾಶ ನೌಕೆಯು ಶಿಯೋಲಿ ಕುಳಿಯ (Shioli Crater) ಇಳಿಜಾರಿನಲ್ಲಿ ಇಳಿಯುತ್ತದೆ. XRISM ಇದು ಯುರೋಪಿಯನ್ ಸ್ಪೇಸ್ ಏಜೆನ್ಸಿ ಇಎಸ್​ಎ ಯ ಸಹಯೋಗದಲ್ಲಿ, ನಾಸಾ ಮತ್ತು ಜಾಕ್ಸಾಗಳ ಜಂಟಿ ಸಂಸ್ಥೆಯಾಗಿದೆ. ಗ್ಯಾಲಕ್ಸಿಗಳನ್ನು ಆವರಿಸಿರುವ ಬಿಸಿ ಅನಿಲ ಮೋಡಗಳು ಮತ್ತು ಕಪ್ಪು ಕುಳಿಗಳಲ್ಲಿ ಉಂಟಾಗುವ ಸ್ಫೋಟಗಳಂತಹ ತೀವ್ರ ವಿದ್ಯಮಾನಗಳಿಂದ ಬಿಡುಗಡೆಯಾಗುವ ಎಕ್ಸ್-ರೇ ಕಿರಣಗಳನ್ನು XRISM ಪರಿಶೀಲನೆ ಮಾಡಲಿದೆ.

"ಕ್ಷ-ಕಿರಣ ಖಗೋಳಶಾಸ್ತ್ರವು ಬ್ರಹ್ಮಾಂಡದ ಅತ್ಯಂತ ಶಕ್ತಿಯುತ ವಿದ್ಯಮಾನಗಳನ್ನು ಅಧ್ಯಯನ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ. ಇದು ಆಧುನಿಕ ಖಗೋಳ ಭೌತಶಾಸ್ತ್ರದಲ್ಲಿ ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲಿದೆ" ಎಂದು ಇಎಸ್ಎ ಯೋಜನಾ ವಿಜ್ಞಾನಿ ಮ್ಯಾಟಿಯೊ ಗೈನಾಜಿ ಹೇಳಿದ್ದಾರೆ.

ಇದನ್ನೂ ಓದಿ : ವಿಜ್ಞಾನ-ನಂಬಿಕೆ ಎರಡೂ ವಿಭಿನ್ನ ವಿಷಯಗಳು; ಇಸ್ರೊ ಅಧ್ಯಕ್ಷ ಸೋಮನಾಥ್

ABOUT THE AUTHOR

...view details