ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕ್ರಿಸ್ಮಸ್ ಹಬ್ಬದ ದಿನವಾದ ಇಂದು ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ (JWST) ಅನ್ನು ಉಡಾವಣೆ ಮಾಡಿದೆ. ಸಾಕಷ್ಟು ನಿರೀಕ್ಷೆಗಳನ್ನು ಈ ಟೆಲಿಸ್ಕೋಪ್ ಮೇಲೆ ಇಟ್ಟುಕೊಳ್ಳಲಾಗಿದೆ.
ವಿಶ್ವದ ಕೌತುಕಗಳನ್ನು ಅರಿಯುವ ಸಲುವಾಗಿ, ಕೆಲವೊಂದು ಸಂದೇಹಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ಅತ್ಯಂತ ಬೃಹತ್ತಾದ ಹಾಗೂ ಶಕ್ತಿಶಾಲಿಯಾದ ಟೆಲಿಸ್ಕೋಪ್ ಅನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಕೆನಡಾದ ಸ್ಪೇಸ್ ಏಜೆನ್ಸಿ ಹಾಗೂ ಯುರೋಪಿಯನ್ ಸ್ಪೇಸ್ ಏಜೆನ್ಸಿಗಳು ಜಂಟಿಯಾಗಿ ಉಡಾವಣೆ ಮಾಡಿವೆ.
ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಅನ್ನು ಈಗ ಉಡಾವಣೆ ಮಾಡಲಾಗಿದ್ದು ಫ್ರೆಂಚ್ ಗಯಾನಾದ ಕೌರು ಸ್ಪೇಸ್ ಪೋರ್ಟ್ನಲ್ಲಿ ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ಏರಿಯನ್-5 ರಾಕೆಟ್ ಸಹಾಯದಿಂದ ಉಡಾವಣೆ ಮಾಡಲಾಗಿದೆ.
ಈ ಕುರಿತು ನಾಸಾ ಟ್ವೀಟ್ ಮಾಡಿದ್ದು, ಹೊಸತನದ ಆರಂಭವಾಗಿದೆ. ವಿಶ್ವದ ಕುರಿತು ನಮ್ಮ ಅರಿವು ಬದಲಾಗಲಿದೆ ಎಂದು ಅಭಿಪ್ರಾಯಪಟ್ಟಿದೆ. ಈಗ ಉಡಾವಣೆಯಾಗಿರುವ ರಾಕೆಟ್ನಿಂದ ಟೆಲಿಸ್ಕೋಪ್ ಪ್ರತ್ಯೇಕಗೊಂಡಿದ್ದು, ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿ ತನ್ನ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತಲಿದೆ.
6.5 ಮೀಟರ್ ವ್ಯಾಸ ಹೊಂದಿರುವ ಈ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ತನ್ನ ಅಸಾಧಾರಣ ಸಾಮರ್ಥ್ಯದ ಮೂಲಕ ಅತ್ಯಂತ ದೂರದಲ್ಲಿನ ನಕ್ಷತ್ರಗಳನ್ನು ಮತ್ತು ಭೂಮಿಯನ್ನು ಹಾಗೂ ಮತ್ತಿತರ ಕಾಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಿದೆ. ಈ ಮೂಲಕ ನಮಗೆ ಈಗ ಬಾಹ್ಯಾಕಾಶ ಬಗ್ಗೆ ಇರುವ ಅರಿವು ಈ ಟೆಲಿಸ್ಕೋಪ್ನ ಮೂಲಕ ಬದಲಾಗುವ ಸಾಧ್ಯತೆಯಿದೆ.
ಇದಕ್ಕೂ ಮೊದಲು ಹಬಲ್ ಟೆಲಿಸ್ಕೋಪ್ ಅತ್ಯಂತ ಶಕ್ತಿ ಶಾಲಿ ಟೆಲಿಸ್ಕೋಪ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿತ್ತು. ಆದರೆ ಈಗ ಆ ಜಾಗಕ್ಕೆ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಬಂದಿದ್ದು, ವಿಶ್ವದ ರಚನೆ ಮತ್ತು ಬೆಳವಣಿಗೆ ಬಗ್ಗೆ ಅತ್ಯಮೂಲ್ಯ ಮಾಹಿತಿಯನ್ನು ಒದಗಿಸುವ ಕೆಲಸ ಮಾಡಲಿದೆ.
ಇದನ್ನೂ ಓದಿ:Leggiest Animal in the World: ಸಿಕ್ಕೆ ಬಿಡ್ತು ನಿಜವಾದ ಸಹಸ್ರಪದಿ.. ಇದುವರೆಗಿನ ದಾಖಲೆಗಳು ಉಡಿಸ್!