ನವದೆಹಲಿ: ಕೃತಕ ಬುದ್ಧಿಮತ್ತೆಯ ಚಾಟ್ಜಿಪಿಟಿ ಇದೀಗ ಎಲ್ಲೆಡೆ ಜನಪ್ರಿಯವಾಗಿದೆ. ಈ ಓಪನ್ಎಐ ಬಳಕೆಯ ಸಾಮರ್ಥ್ಯದ ಜೊತೆಗೆ ಅಪಾಯದ ಕುರಿತು ಈಗಾಗಲೇ ಹಲವು ಚರ್ಚೆಗಳು ನಡೆಯುತ್ತಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿನ ಇದರ ಬಳಕೆ ಮೂಲಕ ವಿದ್ಯಾರ್ಥಿಗಳ ಬುದ್ದಿ ಸಾಮರ್ಥ್ಯ ಕುಗ್ಗಿಸುವ ಕಾರ್ಯ ನಡೆಯಲಾಗುತ್ತಿದೆ ಎಂಬ ಆಪಾದನೆ ಕೇಳಿ ಬಂದಿದೆ. ಇದರಿಂದ ಸಾಮಾಜಿಕ ಗಂಭೀರ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ಈಗಾಗಲೇ ನೀಡಲಾಗಿದೆ. ಜೊತೆಗೆ ಮಾಹಿತಿ ಸಂಗ್ರಹಣೆಗಾಗಿ ಈ ಚಾಟ್ಜಿಪಿಟಿ ಗೌಪತ್ಯೆಯನ್ನು ಉಲ್ಲಂಘಿಸುವ ಸಾಧ್ಯತೆ ಇದೆ ಎಂಬ ಆತಂಕ ಕೂಡ ಎದುರಾಗಿದೆ. ಈ ಹಿನ್ನಲೆ ಈ ಚಾಟ್ಜಿಪಿಟಿ ವಿರುದ್ಧ ಕಠಿಣ ಕ್ರಮಕ್ಕೆ ಇಟಲಿ ಮುಂದಾಗಿದೆ.
ಇಟಾಲಿ ಬಳಕೆದಾರರ ದತ್ತಾಂಶ ಸಂಗ್ರಹ ಪ್ರಕ್ರಿಯೆಯನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಮೈಕ್ರೋಸಾಫ್ಟ್ ಒಡೆತನದ ಓಪನ್ಎಐ (OpenAI)ಗೆ ಇಟಾಲಿ ನಿಯಂತ್ರಣ ಸೂಚನೆ ನೀಡಿದೆ. ಜನರ ಗೌಪತ್ಯೆ ಹಿತದೃಷ್ಟಿಯಿಂದಾಗಿ ಈ ಕ್ರಮಕ್ಕೆ ಮುಂದಾಗಲಾಗಿದೆ ಎನ್ನಲಾಗಿದೆ. ಈ ಆದೇಶ ಕುರಿತು ತಿಳಿಸಿರುವ ಇಟಾಲಿಯನ್ ನಿಯಂತ್ರಕ ಗರನ್ಟೆ, ಚಾಟ್ ಜಿಪಿಟಿ ಯುರೋಪಿಯನ್ ಯುನಿಯನ್ನ ಸಾಮಾನ್ಯ ಡೇಟಾ ರಕ್ಷಣೆ ನಿಯಂತ್ರಣ (ಜಿಡಿಪಿಆರ್)ಯನ್ನು ಉಲ್ಲಂಘಿಸುತ್ತಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಇನ್ನು ಚಾಟ್ ಜಿಪಿಟಿ ಅನುಸರಿಸುತ್ತಿರುವ ನಿಯಮ ಮತ್ತು ಜಾರಿಗೊಳಿಸಲಾದ ಕ್ರಮಗಳ ಕುರಿತು 20 ದಿನಗಳ ಒಳಗಾಗಿ ಒಪನ್ಎಐ ಇಟಾಲಿಯನ್ ನಿಯಂತ್ರಕರಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ 20 ಮಿಲಿಯನ್ ಯುರೋಗಳಷ್ಟು ದಂಡ ಅಥವಾ ಓಪನ್ಎಐ ಒಟ್ಟು ವಿಶ್ವಾದ್ಯಂತ ವಾರ್ಷಿಕ ವಹಿವಾಟಿನ ಶೇಕಡಾ 4 ರಷ್ಟು ದಂಡವನ್ನು ವಿಧಿಸಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ.