ಬೆಂಗಳೂರು:ಮುಂದಿನ ದಿನಗಳಲ್ಲಿ ಸುಧಾರಿತ ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಉಪಗ್ರಹ ಉಡಾವಣಾ ಜವಾಬ್ದಾರಿಯನ್ನು ತನ್ನ ಮಾರುಕಟ್ಟೆ ಆಧಾರಿತ ಸಂಸ್ಥೆಯಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ಗೆ ವರ್ಗಾಯಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
ಸಂವಹನ, ಭೂ ವೀಕ್ಷಣೆ ಮತ್ತು ನ್ಯಾವಿಗೇಷನ್ ಸೇವೆಗಳಿಗೆ ಸಂಬಂಧಿಸಿದಂತೆ ಜನರು ಮತ್ತು ಸರ್ಕಾರಕ್ಕೆ ನೆರವಾಗಲು ಹಲವಾರು ಉಪಗ್ರಹಗಳನ್ನು ರೂಪಿಸಿ ಉಡಾಯಿಸಲಾಗಿದೆ. ಇದರಲ್ಲಿ ಮತ್ತಷ್ಟು ಸುಧಾರಿತ ಸಂಶೋಧನೆ ನಡೆಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದರು.
ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮನಾಥ್ ಅವರು, ಸರ್ಕಾರದ ನಿರ್ದೇಶನದಂತೆಯೇ ಇಸ್ರೋದ ಉಡಾವಣಾ ಕಾರ್ಯಚಟುವಟಿಕೆಗಳನ್ನು ಇನ್ನು ಮುಂದೆ ಸಾರ್ವಜನಿಕ ವಲಯದ ಉದ್ಯಮವಾದ ಎನ್ಎಸ್ಐಎಲ್ಗೆ ನೀಡಲಾಗುತ್ತಿದೆ. ಇದು ಬಾಹ್ಯಾಕಾಶ ಇಲಾಖೆಯ ಅಡಿ ಕೆಲಸ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಚಂದ್ರ, ಮಂಗಳ ಗ್ರಹದ ಅಧ್ಯಯನದಲ್ಲಿರುವ ಇಸ್ರೋ ವಿಜ್ಞಾನಿಗಳ ತಂಡ ಇನ್ನೂ ಹೆಚ್ಚಿನ ಸುಧಾರಿತ ಸಂಶೋಧನೆಗಳನ್ನು ಕೈಗೊಳ್ಳಲಿದ್ದಾರೆ. ದೇಶದ ವೈಜ್ಞಾನಿಕ ಸಂಸ್ಥೆಗಳು ಮತ್ತು ಇಸ್ರೋದ ಮಧ್ಯೆ ಹೆಚ್ಚಿನ ಚಟುವಟಿಕೆಗಳು ನಡೆಯಲು ಇದು ನೆರವಾಗಲಿದೆ ಎಂದರು.
ಓದಿ:ನಾಳೆ ವರ್ಷದ ಕೊನೆಯ ಚಂದ್ರಗ್ರಹಣ: ಎಲ್ಲೆಲ್ಲಿ ಗೋಚರ ಗೊತ್ತಾ?