ಶ್ರೀಹರಿಕೋಟಾ (ಆಂಧ್ರಪ್ರದೇಶ):ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಮತ್ತು NVS-01 ಅನ್ನು ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು NavIC (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟೆಲೇಷನ್) ಸೇವೆಗಳ ನಿರಂತರತೆಯನ್ನು ಖಾತರಿಪಡಿಸುವ ಮಹತ್ವದ ಉಡಾವಣೆಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಶವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.
NVS-01 ಭಾರತದ 2ನೇ ತಲೆಮಾರಿನ NavIC ಉಪಗ್ರಹಗಳಲ್ಲಿ ಮೊದಲನೆಯದು. ಇದು ವರ್ಧಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 19 ನಿಮಿಷಗಳ ಹಾರಾಟದ ನಂತರ ಉಪಗ್ರಹವನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ ಸೇರಿಸಲಾಯಿತು ಎಂದು ಇಸ್ರೋ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ. "ಸುಮಾರು 19 ನಿಮಿಷಗಳ ಹಾರಾಟದ ನಂತರ, NVS-O1 ಉಪಗ್ರಹವನ್ನು ನಿಖರವಾಗಿ ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ ಸೇರಿಸಲಾಯಿತು. ನಂತರ NVS-01 ಅನ್ನು ಉದ್ದೇಶಿತ ಜಿಯೋಸಿಂಕ್ರೋನಸ್ ಕಕ್ಷೆಗೆ ಕೊಂಡೊಯ್ಯುತ್ತದೆ" ಎಂದು ಇಸ್ರೋ ಹೇಳಿದೆ.
ಇದನ್ನೂ ಓದಿ:ಬ್ರಿಟನ್‌ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದ ಇಸ್ರೋ: ವಿಡಿಯೋ
ಭಾರತೀಯ ಪ್ರಾದೇಶಿಕ ಉಪಗ್ರಹ ನ್ಯಾವಿಗೇಷನ್ ಸಿಸ್ಟಮ್ ಆಗಿರುವ ನಾವಿಕ್, ಜಿಪಿಎಸ್ ವ್ಯವಸ್ಥೆಯನ್ನು ಹೋಲುತ್ತದೆ. ಇದು ಭಾರತದಲ್ಲಿ ಮತ್ತು ಮುಖ್ಯ ಭೂಭಾಗದ ಸುತ್ತ 1,500 ಕಿಮೀ ವರೆಗೆ ವಿಸ್ತರಿಸಿರುವ ಪ್ರದೇಶದಲ್ಲಿ ನಿಖರವಾದ ಮತ್ತು ನೈಜ ಸಮಯದ ನ್ಯಾವಿಗೇಶನ್ ಅನ್ನು ಒದಗಿಸುತ್ತದೆ. ನಾವಿಕ್ ಸಂಕೇತಗಳನ್ನು ಬಳಕೆದಾರರ ಲೊಕೇಶನ್ ಅನ್ನು 20 ಮೀಟರ್‌ಗಳಿಗಿಂತ ನಿಖರವಾಗಿ ಮತ್ತು 50 ನ್ಯಾನೊಸೆಕೆಂಡ್‌ಗಳಿಗಿಂತ ಉತ್ತಮ ಸಮಯದ ನಿಖರತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.