ತಿರುವನಂತಪುರಂ :ಭಾರತದ ಚಂದ್ರಯಾನ-3 ಮಿಷನ್ ಯಶಸ್ವಿಯಾಗಿರುವುದಕ್ಕೆ ಇಸ್ರೋ ಮಾಜಿ ಅಧ್ಯಕ್ಷ ಜಿ.ಮಾಧವನ್ ನಾಯರ್ ಸಂತಸ ವ್ಯಕ್ತಪಡಿಸಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವಿಜ್ಞಾನಿಗಳು ಪಡೆಯುವ ವೇತನದ ಐದನೇ ಒಂದು ಭಾಗದಷ್ಟು ವೇತನವನ್ನು ಮಾತ್ರ ನಮ್ಮ ವಿಜ್ಞಾನಿಗಳು ಪಡೆಯುತ್ತಿದ್ದಾರೆ. ಆದರೂ ನಮ್ಮ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಇಷ್ಟು ದೊಡ್ಡ ಮಟ್ಟದ ಐತಿಹಾಸಿಕ ಯಶಸ್ಸನ್ನು ಸಾಧಿಸಿದ್ದಾರೆ ಎಂದು ಹೇಳಿದ್ದಾರೆ.
ಇಸ್ರೋದ ವಿಜ್ಞಾನಿಗಳು ಕಡಿಮೆ ವೇತನ ಪಡೆಯುತ್ತಿರುವುದು ಬಾಹ್ಯಾಕಾಶ ಪರಿಶೋಧನೆಗೆ ಅವರು ಕಡಿಮೆ ವೆಚ್ಚದ ಸಂಶೋಧನೆಗಳನ್ನು ಕಂಡುಹಿಡಿಯಲು ಒಂದು ಕಾರಣವಾಗಿದೆ ಎಂಬುದು ಮಾಧವನ್ ನಾಯರ್ ಅವರ ಅಭಿಪ್ರಾಯವಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶವನ್ನು ಅನ್ವೇಷಿಸುವ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಇತಿಹಾಸದ ಬಗ್ಗೆ ಮಾತನಾಡಿದ ಅವರು, "ಇಸ್ರೋದ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಇತರ ಸಿಬ್ಬಂದಿಗೆ ನೀಡಲಾಗುವ ವೇತನವು ಜಾಗತಿಕವಾಗಿ ನೀಡಲಾಗುವ ವೇತನದ ಐದನೇ ಒಂದು ಭಾಗದಷ್ಟೂ ಇಲ್ಲ. ಅದೂ ಸಹ ಒಂದು ರೀತಿಯ ಅನುಕೂಲವನ್ನೇ ಮಾಡಿದೆ" ಎಂದು ನಾಯರ್ ತಿಳಿಸಿದರು.
ಇಸ್ರೋ ವಿಜ್ಞಾನಿಗಳಲ್ಲಿ ಯಾರೂ ಮಿಲಿಯನೇರ್ಗಳಿಲ್ಲ ಮತ್ತು ಅವರು ಯಾವಾಗಲೂ ತುಂಬಾ ಸಾಮಾನ್ಯ ಮತ್ತು ಸರಳ ಜೀವನವನ್ನು ನಡೆಸುತ್ತಾರೆ ಎಂದು ಅವರು ಹೇಳಿದರು. "ಅವರು ವಾಸ್ತವದಲ್ಲಿ ಹಣದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ಮನಃಪೂರ್ತಿಯಾಗಿ ತಮ್ಮ ಧ್ಯೇಯಕ್ಕೆ ಸಮರ್ಪಿತರಾಗಿದ್ದಾರೆ. ಹೀಗಾಗಿ ನಾವು ಇಷ್ಟು ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ" ಎಂದು ನಾಯರ್ ಹೇಳಿದರು.