ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಎಕೆ ಅನಿಲ್ ಕುಮಾರ್ ಅವರು ಅಂತಾರಾಷ್ಟ್ರೀಯ ಆಸ್ಟ್ರೋನಾಟಿಕಲ್ ಫೆಡರೇಶನ್ (ಐಎಎಫ್) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಇಸ್ರೋ ತಿಳಿಸಿದೆ. ಅನಿಲ್ ಕುಮಾರ್ ಅವರು ಪ್ರಸ್ತುತ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಆಸ್ಟ್ರೋನಾಟಿಕಲ್ ಫೆಡರೇಶನ್ 1951ರಲ್ಲಿ ಸ್ಥಾಪಿತವಾಗಿದ್ದು, 72 ರಾಷ್ಟ್ರಗಳಲ್ಲಿ 433 ಸದಸ್ಯರನ್ನು ಹೊಂದಿರುವ ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಾಗಿದೆ. ಐಎಎಫ್ ಗಗನಯಾತ್ರಿಗಳ ಅಭಿವೃದ್ಧಿಗೆ ಪ್ರೋತ್ಸಾಹಿಸುವುದಲ್ಲದೇ, ಬಾಹ್ಯಾಕಾಶ ಸಂಬಂಧಿತ ವೈಜ್ಞಾನಿಕ ಮತ್ತು ತಾಂತ್ರಿಕತೆಗೆ ಬೆಂಬಲ ನೀಡುತ್ತದೆ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಹೇಳಿದೆ.