ಕರ್ನಾಟಕ

karnataka

ETV Bharat / science-and-technology

ISRO : ನಾಳೆ ಚಂದ್ರನ ಮೇಲೆ ಬೆಳಕು.. ಇಸ್ರೋದಿಂದ ಲ್ಯಾಂಡರ್​, ರೋವರ್ ಕ್ಷಮತೆಯ​ ಮರುಪರೀಕ್ಷೆ - ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್​

lunar lander on moon: ಚಂದ್ರನ ದಕ್ಷಿಣ ಧ್ರುವದಲ್ಲಿ ಉಳಿದುಕೊಂಡಿರುವ ಲ್ಯಾಂಡರ್​ ಮತ್ತು ರೋವರ್ ಅನ್ನು ಇಸ್ರೋ ನಾಳೆ ಮರು ಪರೀಕ್ಷೆಗೆ ಒಳಪಡಿಸಲಿದೆ. ಕ್ಷಮತೆ ಉಳಿದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಗದೊಂದು ಹೊಸ ಚರಿತ್ರೆ ಸೃಷ್ಟಿಯಾಗಲಿದೆ.

ರೋವರ್ ಕ್ಷಮತೆಯ​ ಮರುಪರೀಕ್ಷೆ
ರೋವರ್ ಕ್ಷಮತೆಯ​ ಮರುಪರೀಕ್ಷೆ

By ETV Bharat Karnataka Team

Published : Sep 21, 2023, 3:41 PM IST

ನವದೆಹಲಿ :ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದು 14 ದಿನಗಳ ಕಾಲ ಅಧ್ಯಯನ ನಡೆಸಿ ಸ್ಲೀಪ್​ ಮೋಡ್​​ನಲ್ಲಿರುವ ಲ್ಯಾಂಡರ್​ ಮತ್ತು ರೋವರ್​ ಅನ್ನು ಮತ್ತೆ ಎಚ್ಚರಿಗೊಳಿಸುವ ಸಾಹಸವನ್ನು ಇಸ್ರೋ ಶುಕ್ರವಾರ ಮಾಡಲಿದೆ. ನಾಳೆಯಿಂದ ಚಂದ್ರನ ಮೇಲೆ ಬೆಳಕು ಬೀಳಲಿದ್ದು, ಈ ಸಾಹಸವನ್ನು ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಜ್ಜಾಗಿದೆ.

14 ದಿನಗಳ ಕಾಲ ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಿದ್ದ ರೋವರ್​ ಹಲವಾರು ಮಾಹಿತಿ ಮತ್ತು ಚಿತ್ರಗಳನ್ನು ಭೂಮಿಗೆ ರವಾನಿಸಿತ್ತು. ಚಂದ್ರನ ಉಷ್ಣಾಂಶವನ್ನು ಲೆಕ್ಕ ಹಾಕಿತ್ತು. ಬಳಿಕ ಕತ್ತಲೆ ಆವರಿಸಿದ್ದರಿಂದ ಸುರಕ್ಷಿತ ಸ್ಥಳದಲ್ಲಿ ಲ್ಯಾಂಡರ್​ ಮತ್ತು ರೋವರ್​ ಅನ್ನು ಸ್ಲೀಪ್​ ಮೋಡ್​ಗೆ ಹಾಕಲಾಗಿತ್ತು.

ಉಳಿದಿದೆಯೇ ಲ್ಯಾಂಡರ್​ ಕ್ಷಮತೆ:ಚಂದ್ರನಲ್ಲಿ ತಲಾ 14 ದಿನ ಕತ್ತಲು, ಬೆಳಕು ಇರಲಿದೆ. ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಾಗಿರುತ್ತವೆ. ಹೀಗಾಗಿ ಲ್ಯಾಂಡರ್ ಮತ್ತು ರೋವರ್​ ಅನ್ನು 14 ದಿನಗಳ ಅವಧಿಗೆ ಕೆಲಸ ಮಾಡುವಂತೆ ರೂಪಿಸಲಾಗಿತ್ತು. ಎರಡೂ ಉಪಕರಣಗಳು ನಿರೀಕ್ಷೆಯಂತೆ ಕೆಲಸ ಮಾಡಿದ್ದರಿಂದ ಒಂದು ದಿನ ಮೊದಲೇ ನಿದ್ರಾವಸ್ಥೆಗೆ ಜಾರಿಸಲಾಗಿತ್ತು. ಕತ್ತಲೆ ಆವರಿಸಿದಾಗ ಚಂದ್ರನಲ್ಲಿ -250 ಡಿಗ್ರಿ ಸೆಲ್ಸಿಯಸ್​ ಉಷ್ಟಾಂಶ ಇರುತ್ತದೆ. ಇಂತಹ ಕೊರೆಯುವ ಚಳಿಯಲ್ಲಿ ಉಪಕರಣಗಳು ಕೆಲಸ ಮಾಡುವುದು ಕಷ್ಟಸಾಧ್ಯ.

ಲ್ಯಾಂಡರ್​ ಮತ್ತು ರೋವರ್​ ಸ್ಥಿತಿ ಉತ್ತಮವಾಗಿದ್ದು, ಅವುಗಳ ಬೆಳಕು ಹರಿದ ಮೇಲೆ ಮರು ಕೆಲಸಕ್ಕೆ ನಿಯೋಜಿಸಬಹುದಾ ಎಂಬುದನ್ನು ಇಸ್ರೋ ನಾಳೆ ಪರೀಕ್ಷೆ ನಡೆಸಲಿದೆ. ಹಾಗೊಂದು ವೇಳೆ ಈ ಉಪಕರಣಗಳು ಚಳಿಯನ್ನೂ ಮೀರಿ ಕೆಲಸ ಶುರು ಮಾಡಿದರೆ, ಇಂಜಿನಿಯರಿಂಗ್​ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲು ಸ್ಥಾಪನೆಯಾಗಲಿದೆ.

ಕೆಲಸ ಮಾಡಿದಲ್ಲಿ ಮತ್ತೆ ಅಧ್ಯಯನಕ್ಕೆ ಬಳಕೆ:ಈ ಬಗ್ಗೆ ಮಾತನಾಡಿರುವ ಒಡಿಶಾದ ಬಾಹಾಕ್ಯಾಶ ವಿಜ್ಞಾನಿ ಸುವೆಂದು ಪಟ್ನಾಯಕ್ ಅವರು, ಇಸ್ರೋ ಶುಕ್ರವಾರ ನಡೆಸುವ ಪರೀಕ್ಷೆ ಯಶಸ್ವಿಯಾದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಚರಿತ್ರೆ ಸೃಷ್ಟಿಯಾಗಲಿದೆ. ಉಪಕರಣಗಳು ಕೆಲಸ ಮಾಡಲು ಶುರು ಮಾಡಿದರೆ, ಅವುಗಳನ್ನು ಮತ್ತೆ ಮತ್ತೆ ಬಳಕೆ ಮಾಡಲು ಸಾಧ್ಯವಾಗುತ್ತದೆ. 14 ದಿನಗಳವರೆಗೆ ಮಾತ್ರ ಅವನ್ನು ರೂಪಿಸಲಾಗಿತ್ತು ಎಂದು ಹೇಳಿದರು.

ಎಲೆಕ್ಟ್ರಾನಿಕ್ ವಸ್ತುಗಳು ಭಾರೀ ತಾಪಮಾನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ಆದ್ದರಿಂದ ಇವುಗಳು 14 ದಿನಗಳ ನಂತರ ಕೆಲಸ ಮಾಡುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೆಲವು ವಿಜ್ಞಾನಿಗಳು ಇವುಗಳು ಮತ್ತೆ ಕೆಲಸ ಮಾಡಬಹುದು ಎಂಬ ಭರವಸೆ ಹೊಂದಿದ್ದಾರೆ. ಹಾಗಾಗಿ ಇಸ್ರೋ ಮತ್ತೆ ಪರೀಕ್ಷೆಗೆ ಮುಂದಾಗಿದೆ. ಇದು ಯಶಸ್ವಿಯಾದರೆ, ಪ್ರಯೋಗಗಳು ಮುಂದುವರಿಸಲು ನೆರವಾಗಲಿದೆ ಎಂದು ಪಟ್ನಾಯಕ್ ಹೇಳಿದರು.

ಆಗಸ್ಟ್ 23 ರಂದು ಚಂದ್ರಯಾನ-3 ಯೋಜನೆಯ ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದು, ಬಾಹ್ಯಾಕಾಶ ವಿಜ್ಞಾನದಲ್ಲಿ ಚರಿತ್ರೆ ಸೃಷ್ಟಿಸಿತ್ತು. ಈ ಐತಿಹಾಸಿಕ ಸಾಧನೆಯನ್ನು ಮಾಡಿದ ಮೊದಲ ಮತ್ತು ಚಂದ್ರನಲ್ಲಿಗೆ ಇಳಿದ ನಾಲ್ಕನೇ ದೇಶ ಭಾರತ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು.

ಇದನ್ನೂ ಓದಿ:ಚಂದ್ರನಲ್ಲಿ ಮಾನವ ವಾಸ ಮಾಡಬಹುದಾದ ವಾತಾವರಣ ಇರಬಹುದು.. ಇಸ್ರೋ ಚಂದ್ರಯಾನ ಮಿಷನ್​ಗಳ ಮಾಹಿತಿ: ವಿಜ್ಞಾನಿ ದುವಾರಿ ಮೆಚ್ಚುಗೆ

ABOUT THE AUTHOR

...view details