ಕರ್ನಾಟಕ

karnataka

ETV Bharat / science-and-technology

ಚಂದ್ರನ ಕಕ್ಷೆಯಿಂದ ಭೂ ಕಕ್ಷೆಗೆ ಮರಳಿದ ಚಂದ್ರಯಾನ-3ರ ಪ್ರೊಪಲ್ಷನ್​ ಮಾಡ್ಯೂಲ್​: ಇಸ್ರೋ

ಚಂದ್ರನ ಸುತ್ತ ಕಾರ್ಯಾಚರಣೆ ನಡೆಸುತ್ತಿದ್ದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್ ಯಶಸ್ವಿಯಾಗಿ ಭೂಮಿಯ ಕಕ್ಷೆಗೆ ಮರಳಿದೆ.

ಇಸ್ರೋ
ಇಸ್ರೋ

By ETV Bharat Karnataka Team

Published : Dec 5, 2023, 10:17 AM IST

ನವದೆಹಲಿ:ಚಂದ್ರಯಾನ-3 ಯೋಜನೆಯಲ್ಲಿನ ವಿಕ್ರಮ್​ ಲ್ಯಾಂಡರ್​ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಸಿ ಬಾಹ್ಯಾಕಾಶ ಸಂಶೋಧನೆಗಳಲ್ಲಿ ಚರಿತ್ರೆ ಸೃಷ್ಟಿಸಿದ್ದ ಇಸ್ರೋ, ಇದೀಗ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಚಂದ್ರನ ಕಕ್ಷೆಯಲ್ಲಿ ಗಿರಕಿ ಹೊಡೆಯುತ್ತಿದ್ದ ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಭೂಕಕ್ಷೆಗೆ ಸ್ಥಳಾಂತರಿಸುವ ವಿಶಿಷ್ಟ ಪ್ರಯೋಗದಲ್ಲಿ ಯಶಸ್ವಿಯಾಗಿದೆ.

ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿದ್ದ ಪ್ರೊಪಲ್ಷನ್​ ಮಾಡ್ಯೂಲ್​ ತನ್ನ ನಿರ್ಧರಿತ ಕಾರ್ಯಗಳನ್ನು ಪೂರೈಸಿದ್ದು, ಅದನ್ನೀಗ ಭೂಕಕ್ಷೆಗೆ ಸ್ಥಳಾಂತರಿಸಲಾಗಿದೆ. ಚಂದ್ರನ ಮೇಲೆ ಲ್ಯಾಂಡರ್​ ಅನ್ನು ಇಳಿಸುವುದಕ್ಕೆ ನೆರವು ನೀಡುವುದು ಈ ಮಾಡ್ಯೂಲ್​ ಪ್ರಮುಖ ಉದ್ದೇಶವಾಗಿತ್ತು. ಆ ಕಾರ್ಯವನ್ನು ಪ್ರೊಪಲ್ಷನ್​ ಮಾಡ್ಯೂಲ್​ ಯಶಸ್ವಿಯಾಗಿ ಮಾಡಿದೆ ಎಂದು ಇಸ್ರೋ ಹೇಳಿದೆ.

ಮಾಡ್ಯೂಲ್​ನಲ್ಲಿ ಹೆಚ್ಚುವರಿ ಇಂಧನ:ಚಂದ್ರಯಾನ-3ರ ಎಲ್ಲ ಯೋಜಿತ ಉದ್ದೇಶಗಳು ಸಂಪೂರ್ಣವಾಗಿ ಯಶಸ್ಸು ಕಂಡಿವೆ ಎಂದು ಬಣ್ಣಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಪ್ರೊಪಲ್ಷನ್ ಮಾಡ್ಯೂಲ್‌ ಮತ್ತು ಲ್ಯಾಂಡರ್ ಪ್ರತ್ಯೇಕವಾದ ನಂತರ ಪ್ರೊಪಲ್ಷನ್ ಮಾಡ್ಯೂಲ್​ನಲ್ಲಿನ ಸ್ಪೆಕ್ಟ್ರೋ ಪೋಲಾರಿಮೆಟ್ರಿ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ (SHAPE) ಪೆಲೋಡ್‌ ಕೂಡ ತನ್ನ ಕೆಲಸ ಮಾಡಿದೆ. ಈ ಪೆಲೋಡ್​ನ ಜೀವಿತಾವಧಿ 3 ತಿಂಗಳಾಗಿದೆ. ಇದು ಚಂದ್ರನ ಕಕ್ಷೆಯ ಸುತ್ತ ಕಾರ್ಯಾಚರಣೆ ನಡೆಸಿದ್ದರಿಂದ ಪ್ರೊಪಲ್ಷನ್ ಮಾಡ್ಯೂಲ್​ಗೆ 100 ಕೆಜಿಯಷ್ಟು ಹೆಚ್ಚಿನ ಇಂಧನ ಲಭ್ಯವಾಯಿತು ಎಂದು ಇಸ್ರೋ ಹೇಳಿದೆ.

ಭವಿಷ್ಯದ ಚಂದ್ರಯಾನಗಳಿಗೆ ಮಾಡ್ಯೂಲ್​ನಲ್ಲಿನ ಇಂಧನವನ್ನು ಬಳಕೆ ಮಾಡಿಕೊಳ್ಳಲಾಗುವುದು. ಜೊತೆಗೆ ಚಂದ್ರನಿಂದ ವಾಪಸ್​ ನೌಕೆಗಳನ್ನು ಭೂಮಿಗೆ ತರುವ ಯೋಜನೆಗಳಿಗೆ ಈ ವಿಧಾನವನ್ನು ಬಳಸಿಕೊಳ್ಳಲಾಗುವುದು. ಭೂಕಕ್ಷೆಯಲ್ಲಿ SHAPE ಪೆಲೋಡ್ ಅನ್ನು ಮುಂದುವರಿಸಲಾಗುವುದು. ಇದು ಚಂದ್ರನ ಮೇಲೆ ಬೀಳದಂತೆ ತಡೆದು, 36,000 ಕಿಮೀ ದೂರದಲ್ಲಿರುವ ಭೂಮಿಯ ಜಿಯೋಸಿಂಕ್ರೋನಸ್ ಈಕ್ವಟೋರಿಯಲ್ ಆರ್ಬಿಟ್ (ಜಿಇಒ) ಕಕ್ಷೆಗೆ ತರಲಾಗಿದೆ. ಜೊತೆಗೆ ಆ ಕಕ್ಷೆಯಲ್ಲಿನ ಇತರ ನೌಕೆಗಳ ಜೊತೆ ಘರ್ಷಣೆಯಾಗದಂತೆ ನಿಲ್ಲಿಸಲಾಗಿದೆ ಎಂದಿದೆ.

ಪ್ರಸ್ತುತ ಪ್ರೊಪಲ್ಷನ್​ ಮಾಡ್ಯೂಲ್​ ಭೂ ಕಕ್ಷೆಯ ಉಪಗ್ರಹಗಳೊಂದಿಗೆ ನಿಕಟ ಸಂಪರ್ಕ ಸಾಧಿಸುವ ಸಾಧ್ಯತೆ ಇಲ್ಲ. ಯೋಜನೆಯ ಪ್ರಕಾರ, ಭೂಮಿಯು ತನ್ನ ವೀಕ್ಷಣಾ ಕ್ಷೇತ್ರದಲ್ಲಿದ್ದಾಗಲೆಲ್ಲಾ SHAPE ಪೆಲೋಡ್ ಅನ್ನು ನಿರ್ವಹಿಸಲಾಗುತ್ತದೆ. ಪೆಲೋಡ್‌ನ ವಿಶೇಷ ಕಾರ್ಯಾಚರಣೆಯನ್ನು ಅಕ್ಟೋಬರ್ 28, 2023 ರಂದು ಸೂರ್ಯಗ್ರಹಣದ ಸಮಯದಲ್ಲಿ ನಡೆಸಲಾಯಿತು. ಇದರ ಮತ್ತಷ್ಟು ಕಾರ್ಯಾಚರಣೆಗಳು ಮುಂದುವರಿಯುತ್ತದೆ ಎಂದು ಇಸ್ರೋ ಹೇಳಿದೆ.

ಚಂದ್ರಯಾನ-3 ಯಶಸ್ಸು:ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಜುಲೈ 14, 2023 ರಂದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಆಗಸ್ಟ್ 23 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ತನ್ನ ಐತಿಹಾಸಿಕ ಸ್ಪರ್ಶವನ್ನು ಕಂಡಿತು. ತರುವಾಯ, ಅದರಲ್ಲಿದ್ದ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಇಳಿದು ಅಧ್ಯಯನ ನಡೆಸಿತ್ತು. ಸದ್ಯ ಅದು ಸುಪ್ತಾವಸ್ಥೆಯಲ್ಲಿದೆ.

ಇದನ್ನೂ ಓದಿ:ನಾಸಾದ ಮಾನವಸಹಿತ ಚಂದ್ರಯಾನ 2027ಕ್ಕೆ ಮುಂದೂಡಿಕೆ

ABOUT THE AUTHOR

...view details