ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಬುದ್ಧಿವಂತ ಕೃತಕ ಕಾಲನ್ನು ರೂಪಿಸಿದೆ. ಈ ಕೃತಕ ಕಾಲು ಶೀಘ್ರದಲ್ಲೇ ವಾಣಿಜ್ಯೀಕರಣಗೊಳ್ಳುವ ನಿರೀಕ್ಷೆಯಿದೆ. ಕೃತಕ ಕಾಲು ಲಭ್ಯವಿರುವ ಆಯ್ಕೆಗಳಿಗಿಂತ ಸುಮಾರು 10 ಪಟ್ಟು ಅಗ್ಗವಾಗಿದೆ ಎನ್ನುವುದು ಇನ್ನೂ ವಿಶೇಷ. ಇದು ಮೊಣಕಾಲಿನಿಂದ ಕೆಳಕ್ಕೆ ಇರುವ ಅಂಗಗಳನ್ನು ಕಳೆದುಕೊಂಡವರಿಗೆ ಭಾರಿ ಅನುಕೂಲ ಆಗಲಿದೆ. ಇಂತಹವರು ಆರಾಮದಾಯಕವಾದ ನಡಿಗೆಯೊಂದಿಗೆ ಎಲ್ಲರಂತೆ ಸಹಜವಾಗಿ ನಡೆಯಲು ಅನುಕೂಲ ಮಾಡಿಕೊಡುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ಶುಕ್ರವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೋ ಅಭಿವೃದ್ಧಿಪಡಿಸಿದ ಕೃತಕ ಕಾಲಿನ ಪ್ರಮುಖ ಐದು ಅಂಶಗಳು ಹೀಗಿವೆ.
1. ಈ ಸಂಬಂಧ ಟ್ವೀಟ್ ಮಾಡಿರುವ ಇಸ್ರೋ 1.6 ಕೆಜಿ ಮೈಕ್ರೊಪ್ರೊಸೆಸರ್-ನಿಯಂತ್ರಿತ ಮೊಣಕಾಲು (MPK) ಅಂಗವಿಕಲನಿಗೆ ಅತ್ಯಂತ ಕಡಿಮೆ ಸಹಾಯದೊಂದಿಗೆ 100 ಮೀಟರ್ ಕಾರಿಡಾರ್ನಲ್ಲಿ ಸರಾಗವಾಗಿ ನಡೆಯಲು ಅನುವು ಮಾಡಿಕೊಟ್ಟಿದೆ. ಎಲ್ಲರಂತೆ ಒಬ್ಬ ಅಂಗವಿಕಲ ನಡೆಯಲು ಸಾಧ್ಯವಾಗುವಷ್ಟರ ಮಟ್ಟಿಗೆ ಕೃತಕ ಕಾಲಿನ ಅಭಿವೃದ್ಧಿ ಮುಂದುವರೆಯಲಿದೆ. ಇನ್ನಷ್ಟು ಸುಧಾರಣೆಗಳು ಮುಂದುವರೆದಿವೆ ಎಂದು ಟ್ವೀಟ್ನಲ್ಲಿ ಹೇಳಲಾಗಿದೆ.
2. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC), ISRO, ಈ MPK ಗಳನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಲೊಕೊಮೊಟರ್ ಡಿಸೆಬಿಲಿಟೀಸ್ (NILD), Pt. ದೀನದಯಾಳ್ ಉಪಾಧ್ಯಾಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪರ್ಸನ್ಸ್ ವಿಥ್ ಫಿಸಿಕಲ್ ಡಿಸಾಬಿಲಿಟೀಸ್ (ದಿವ್ಯಾಂಗ್ ಜನ್) (PDUNIPPD (D)) ನೊಂದಿಗೆ ಸೇರಿಕೊಂಡು ಜಂಟಿ ಸಹಭಾಗಿತ್ವದಲ್ಲಿ ಈ ಕೃತಕ ಕಾಲನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಆರ್ಟಿಫಿಶಿಯಲ್ ಲಿಂಬ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ALIMCO) ದೃಢಪಡಿಸಿದೆ.