ಚೆನ್ನೈ : ತನ್ನ ಸಣ್ಣ ಉಪಗ್ರಹ ಉಡಾವಣಾ ವಾಹನ (Small Satellite Launch Vehicle -SSLV) ತಂತ್ರಜ್ಞಾನವನ್ನು ಖಾಸಗಿ ಕಂಪನಿಗಳಿಗೆ ವರ್ಗಾಯಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ನಿರ್ಧರಿಸಿದೆ. ಇದಕ್ಕಾಗಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ (IN-SPAce)ವು ಆಸಕ್ತಿಯ ಅಭಿವ್ಯಕ್ತಿ (ಇಒಐ) ಪ್ರಕಟಣೆಯನ್ನು ಕೂಡ ಬಿಡುಗಡೆ ಮಾಡಿದೆ. IN-SPAce ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳನ್ನು ನಿಯಂತ್ರಿಸುವ ಪ್ರಾಧಿಕಾರವಾಗಿದೆ.
ಷರತ್ತುಗಳ ಪ್ರಕಾರ, ಆಸಕ್ತ ಖಾಸಗಿ ಕಂಪನಿಗಳು ಅಥವಾ ಕಂಪನಿಗಳ ಒಕ್ಕೂಟದ ನೇತೃತ್ವ ವಹಿಸುವ ಸಂಸ್ಥೆಯು ಕನಿಷ್ಠ 400 ಕೋಟಿ ರೂಪಾಯಿ ವಹಿವಾಟು ಹೊಂದಿರಬೇಕು ಮತ್ತು ಲಾಭದಲ್ಲಿ ನಡೆಯುತ್ತಿರಬೇಕು. ತಂತ್ರಜ್ಞಾನ ಪಡೆಯಲು ಇಚ್ಛಿಸುವ ಕಂಪನಿಯು ಏಳು ವರ್ಷಗಳಿಗಿಂತ ಕಡಿಮೆಯಿಲ್ಲದ ಅವಧಿಗೆ ಕಾರ್ಯಾಚರಣೆಯಲ್ಲಿರಬೇಕು ಮತ್ತು ಕನಿಷ್ಠ ಐದು ವರ್ಷಗಳ ಉತ್ಪಾದನಾ ಅನುಭವ ಹೊಂದಿರಬೇಕು. ಇದರ ಪ್ರಕಾರ ಇತ್ತೀಚಿನ ರಾಕೆಟ್ ಸ್ಟಾರ್ಟ್ ಅಪ್ ಕಂಪನಿಗಳು ಇದರಲ್ಲಿ ಭಾಗವಹಿಸುವಂತಿಲ್ಲ.
ತಂತ್ರಜ್ಞಾನದ ವರ್ಗಾವಣೆಗಾಗಿ ಪರಿಗಣಿಸಲಾದ SSLV ಕಾನ್ಫಿಗರೇಶನ್‌ನ ಬೌದ್ಧಿಕ ಆಸ್ತಿ ಹಕ್ಕುಗಳು ಇಸ್ರೊ ಒಡೆತನದಲ್ಲಿಯೇ ಮುಂದುವರಿಯುತ್ತದೆ. ಆದಾಗ್ಯೂ ರಾಕೆಟ್ ತಂತ್ರಜ್ಞಾನದ ವಿಶೇಷವಲ್ಲದ ಮತ್ತು ವರ್ಗಾವಣೆ ಮಾಡಲಾಗದ ಪರವಾನಗಿಯನ್ನು ಆಯ್ಕೆ ಮಾಡಿದ ಕಂಪನಿಗೆ ನೀಡಲಾಗುತ್ತದೆ. ಇಸ್ರೋ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಎಸ್‌ಎಸ್‌ಎಲ್‌ವಿ ತಂತ್ರಜ್ಞಾನ 500 ಕೆಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ ಮತ್ತು ಘನ ಇಂಧನದಿಂದ ಚಾಲಿತವಾಗಿದೆ. IN-SPAce ಪ್ರಕಾರ, SSLV ತಂತ್ರಜ್ಞಾನವನ್ನು ಭಾರತೀಯ ಖಾಸಗಿ ಕೈಗಾರಿಕೆಗಳಿಗೆ ಮಾತ್ರ ವರ್ಗಾಯಿಸಲಾಗುತ್ತದೆ.
ಈಗಾಗಲೇ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಎಂಬ ಹೆಸರಿನ ವಾಣಿಜ್ಯ ವಿಭಾಗವನ್ನು ಹೊಂದಿರುವ ಇಸ್ರೋ, ತಂತ್ರಜ್ಞಾನದ ಒಡೆತನ ವನ್ನು ಹೊಂದಿದೆ. ಇಂಥ ಪರಿಸ್ಥಿತಿಯಲ್ಲಿ ಇನ್-ಸ್ಪೇಸ್ ತಂತ್ರಜ್ಞಾನದ ವರ್ಗಾವಣೆಯಲ್ಲಿ ಹೇಗೆ ತೊಡಗಿಸಿಕೊಳ್ಳುತ್ತಿದೆ ಎಂಬ ಪ್ರಶ್ನೆಗೆ ಇಸ್ರೋದ ಹಿರಿಯ ಅಧಿಕಾರಿಯೊಬ್ಬರು, “ಒಪ್ಪಂದವು NSIL ನೊಂದಿಗೆ ಇರುತ್ತದೆ. INSPACe ಇಸ್ರೊ ಆದೇಶದ ಪ್ರಕಾರ ಒಪ್ಪಂದವನ್ನು ಜಾರಿಗೊಳಿಸಲಿದೆ" ಎಂದರು.